ಸುರತ್ಕಲ್: ಉರುಮಾಲ್ ಮಾಸಪತ್ರಿಕೆ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

ಸುರತ್ಕಲ್: ಉರುಮಾಲ್ ಮಾಸ ಪತ್ರಿಕೆಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಕಾಶಕ ಎಂ.ಸರ್ಫರಾಝ್ ನವಾಝ್ ಅವರ ನೇತೃದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವು ರವಿವಾರ ಮಂಗಳಪೇಟೆಯ ಉರುಮಾಲ್ ಕಚೇರಿಯ ಬಳಿ ನೆರವೇರಿತು.
ಸಮಾರಂಭವನ್ನು ಮಂಗಳಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಶಫೀಕ್ ಸಖಾಫಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಹಸನಬ್ಬ ವಹಿಸಿದ್ದರು.
ದುವಾ ಆಶೀರ್ವಚನವನ್ನು ಉರುಮಾಲ್ ಮಾಸ ಪತ್ರಿಕೆಯ ನಿರ್ದೇಶಕರಾದ ಸೈಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕರೆ ನೆರವೇರಿಸಿದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ ನೂತನ ನಾಲ್ಕು ನವ ಜೋಡಿಗಳಿಗೆ ನಿಖಾಹ್ ನೆರವೇರಿಸಿದರು.
ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿಗೆ ಉರುಮಾಲ್ ಮಾಸ ಪತ್ರಿಕೆಯ ವತಿಯಿಂದ ಎಲ್ಲಾ ವಧುಗಳಿಗೆ ತಲಾ 40 ಗ್ರಾಂ ಚಿನ್ನಾಭರಣ, ಮದುವೆಯ ವಸ್ತ್ರ ಹಾಗೂ ಎಲ್ಲಾ ವರರಿಗೆ ಕೈಗಡಿಯಾರ, ಮದುವೆಯ ಸಂಪೂರ್ಣ ವಸ್ತ್ರವನ್ನು ನೀಡಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಮಾತನಾಡಿ, ಉರುಮಾಲ್ ಮಾಸಪತ್ರಿಕೆಯಾಗಿದ್ದರೂ, ಎಲ್ಲಾ ಪತ್ರಿಕಾ ಸಂಸ್ಥೆಗಳಿಗೆ ಮಾದರಿಯಾಗಿದೆ. ಒಂದೆಡೆ ತನ್ನ ಲೇಖನಿಯ ಮೂಲಕ ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದ್ದು, ಇನ್ನೊಂದು ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಅಸಹಾಯಕರ ಆಶಾಕಿರಣಾಗಿ ಜನ ಮನ್ನಣೆ ಪಡೆದುಕೊಂಡಿದೆ ಎಂದು ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಕೆ. ಆಭಯಚಂದ್ರ ಜೈನ್, ಯುವ ಸಮುದಾಯ ಯಾವುದೇ ರೀತಿಯ ಜಾತಿ , ಧರ್ಮಗಳ ನಡುವಿನ ಧ್ವೇಷದ ಸಂಕೋಲೆಗೆ ಸಿಲುಕದೇ ವಿದ್ಯಾಭ್ಯಾಸ ಪಡೆದು ಉನ್ನತ ಉದ್ದೆಗಳ ಕಡೆಗೆ ಗಮನಹರಿಸಿ ತಮ್ಮ ಕುಟುಂಬದ ಜೊತೆಗೆ ಅಶಕ್ತರಿಗೆ ಊರುಗಳಾಗಬೇಕೆಂದರು.
ವಧು- ವರರು ಉರುಮಾಲ್ ಮಾಸಿಕ ಶ್ರಮವಹಿಸಿ ನಡೆಸಿರುವ ವಿವಾಹಗಳಿಗೆ ತಕ್ಕದಾಗಿ ತಮ್ಮ ಜಿವನದ ಉದ್ದಕ್ಕೂ ಇಂತಹಾ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ನೀಡುತ್ತಿರಬೇಕೆಂದು ನವ ದಂಪತಿಗೆ ಶುಭಹಾರೈಸಿದರು.
ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಮಾತನಾಡಿ, ಉರುಮಾಲ್ ಮಾಸಪತ್ರಿಕೆ ಸಮಾಜವೇ ಮೆಚ್ಚುವ ಬಹುದೊಡ್ಡ ಕೆಲಸ ಮಾಡುತ್ತಿದೆ. ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಬಡ ರೋಗಿಗಳಿಗೆ ಆರ್ಥಿಕ ನೆರವು ಇನ್ನಿತರ ಉತ್ತಮ ಕೆಲಸಕಾರ್ಯಗಳ ಮೂಲಕ ಮನೆಮಾತಾಗಿದೆ. ಇದರ ಹಿಂದೆ ಎಂ. ಸದ್ಫರಾಝ್ ಎಂಬ ಅವಿರತ ಶ್ರಮಿಸುವ ಶ್ರಮಜೀವಿಯ ಬಹುದೊಡ್ಡ ಕೊಡುಗೆ ಅಡಗಿದೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭ ಕಳೆದ ಶೈಕ್ಣಿಕ ಸಾಲಿನಲ್ಲಿ ಅತೀಹೆಚ್ಚು ಅಂಕಗಳಿಸಿದ ಮಂಗಳಪೇಟೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಯುವೇರಿಯಾ ಹಾಗೂ 7ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿ ತೇರ್ಗಡೆಯಾದ ಫರ್ಹಾನಗೆ ಉರುಮಾಲ್ ಮಾಸಪತ್ರಿಕೆಯ ವತಿಯಿಂದ ಚಿನ್ನದ ಉಂಗುರ, ಬೆಲೆಬಾಳುವ ಉಡುಪು ಉಡುಗೊರೆ ನೀಡಿ ಅಥಿತಿಗಳು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಬಿ.ಎ.ಮಮ್ತಾಝ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಬಿ.ಎ. ಮೊಯ್ದೀನ್ ಬಾವ, ದ.ಕ. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮನಪಾ ಸದಸ್ಯ ಅನಿಲ್ ಕುಮಾರ್ ಮೋಹನ್ ಕೋಟ್ಯಾನ್ ಮೊದಲಾದವರು ಮಾತನಾಡಿ, ಉರುಮಾಲ್ ಮಾಸಪತ್ರಿಕೆ ಮತ್ತು ನವ ದಂಪತಿಗೆ ಶುಭಹಾರೈಸಿದರು.
ನಾರ್ಲಪದವು ಜುಮಾ ಮಸೀದಿ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಉದ್ಯಮಿ ದಾವೂದ್ ಹಕೀಮ್, ಕೆಪಿಸಿಸಿ ಸದಸ್ಯ ಎಚ್. ವಸಂತ ಬರ್ನಾರ್ಡ್ ಹಳೆಯಂಗಡಿ, ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷ ಬದ್ರಿಯಾ ಅಶ್ರಫ್ ಕಾನ, ಮುಲ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಸೈಯ್ಯದ್ ಹಾಜಿ ಸೂರಿಂಜೆ ಮೊದಲಾದವರು ಉಪಸ್ಥಿತರಿದ್ದರು.
ಉರುಮಾಲ್ ಮಾಸ ಪತ್ರಿಕೆಯ ಸಂಪಾದಕ ಎಂ.ಎಚ್. ಹಸನ್ ಝುಹ್ ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ರುವಾರಿ ಹಾಗೂ ಉರುಮಾಲ್ ಮಾಸಪತ್ರಿಕೆಯ ಪ್ರಕಾಶಕ ಎಂ. ಸರ್ಫರಾಝ್ ನವಾಝ್ ಅಥಿತಿಗಳನ್ನು ಸ್ವಾಗತಿಸಿದರು. ಬ್ಲಡ್ ಡೋನರ್ಸ್ ಕರ್ನಾಟಕ ಇದರ ಸದಸ್ಯ ಅಬ್ದುಲ್ ಹಮೀದ್ ಗೋಲ್ತಮಜಲು ಕಾರ್ಯಕ್ರಮ ನಿರೂಪಿಸಿದರು.







.jpeg)



.jpeg)
.jpeg)

.jpeg)
.jpeg)






