ಲಖಿಂಪುರಖೇರಿ: ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಮತ್ಯು
ಇಬ್ಬರ ಬಂಧನ, ಓರ್ವ ಪೊಲೀಸ್ ಸಿಬ್ಬಂದಿ ಅಮಾನತು

ಲಖಿಂಪುರಖೇರಿ, ಸೆ. ೧೮: ಲೈಂಗಿಕ ದೌರ್ಜನ್ಯದ ಸಂದರ್ಭ ಇಬ್ಬರು ಯುವಕರಿಂದ ಹರಿತವಾದ ಆಯುಧಗಳಿಂದ ದಾಳಿಗೊಳಗಾಗಿ ತೀವ್ರ ಗಾಯಗೊಂಡ ೨೦ ವರ್ಷದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕಚೇರಿಯಿಂದ ಸುಮಾರು ೫೦ ಕಿ.ಮೀ. ದೂರದಲ್ಲಿರುವ ಭಿರಾ ಪ್ರದೇಶದಲ್ಲಿರುವ ತನ್ನ ಮನೆಯಲಿ ಯುವತಿ ಶುಕ್ರವಾರ ಸಾವನ್ನಪ್ಪಿದ್ದಾಳೆ. ಯುವತಿಯ ಮೃತದೇಹದ ಅಂತ್ಯ ಕ್ರಿಯೆಯನ್ನು ಅವರ ಕುಟುಂಬ ತಮ್ಮ ಗ್ರಾಮದಲ್ಲಿ ಶನಿವಾರ ಸಂಜೆ ನಡೆಸಿದೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಘಟನೆಯ ಬಳಿಕ ಕೊಲೆಯಲ್ಲದ ದಂಡನೀಯ ನರ ಹತ್ಯೆ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಕುಟುಂಬದ ದೂರನ್ನು ಆಲಿಸದ ಪೊಲೀಸ್ ಹೊರ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಖೇರಿ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತ್ವರಿತ ನ್ಯಾಯ ನೀಡುವಂತೆ ಆಗ್ರಹಿಸಿ ಯುವತಿಯ ಸಂಬಂಧಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕ ಗ್ರಾಮದಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. ಗ್ರಾಮಕ್ಕೆ ಧಾವಿಸಿದ ಎಎಸ್‌ಪಿ ಅರುಣ್ ಕುಮಾರ್ ಸಿಂಗ್, ಡಿಎಸ್‌ಪಿ ರಾಜೇಶ್ ಕುಮಾರ್ ಹಾಗೂ ಇತರರು ಪ್ರತಿಭಟನಕಾರರನ್ನು ಸಮಾಧಾನಪಡಿಸಿದರು. ಅಲ್ಲದೆ, ಪರಿಣಾಮಕಾರಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.







