ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಸುಟ್ಟ ಗಾಯದಿಂದ ಬಳಲುತ್ತಿದ್ದ ದಲಿತ ಬಾಲಕಿ ಮೃತ್ಯು

ಸಾಂದರ್ಭಿಕ ಚಿತ್ರ (Photo: PTI)
ಲಕ್ನೊ: ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಇಬ್ಬರು ದುರುಳರು ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ ಹತ್ತು ದಿನಗಳ ನಂತರ, 16 ವರ್ಷದ ಬಾಲಕಿ ಸುಟ್ಟ ಗಾಯಗಳಿಂದ ಸೋಮವಾರದ ಬೆಳಗಿನ ಜಾವ ಸಾವಿಗೀಡಾಗಿದ್ದಾಳೆ (Minor Dalit Girl Dies )ಎಂದು ವರದಿಯಾಗಿದೆ.
ಬಾಲಕಿ ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.
ಇಬ್ಬರು ಆರೋಪಿಗಳಾದ ರಾಜವೀರ್ (19 ವರ್ಷ) ಹಾಗೂ ತಾರಾಚಂದ್ ಅಲಿಯಾಸ್ ತರುಣ್ ಕುಮಾರ್ (25 ವರ್ಷ) ವಿರುದ್ಧ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಭಾರತೀಯ ದಂಡ ಸಂಹಿತೆ (IPC) ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಾಯಿದೆ ಅಡಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಪ್ರಭು ತಿಳಿಸಿದ್ದಾರೆ
ಇಬ್ಬರಲ್ಲಿ ಒಬ್ಬಾತ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ, ನಂತರ ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಭವಿಸಿದಾಗ ತನ್ನ ಮಗಳು ಮನೆಯಲ್ಲಿ ಒಬ್ಬಳೇ ಇದ್ದಳು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ನಾನು ಮನೆಯಲ್ಲಿ ಇರಲಿಲ್ಲ, ನನ್ನ ಹೆಂಡತಿಯೂ ಇರಲಿಲ್ಲ, ಕೆಲವರು ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಸೆ.7ರಂದು ಜಿಲ್ಲೆಯ ಮಧೋತಂಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದರೆ, ಶನಿವಾರ ಸಂತ್ರಸ್ತೆ ತನಗಾದ ಸಂಕಷ್ಟವನ್ನು ವಿವರಿಸುತ್ತಿರುವ ವೀಡಿಯೊ ವೈರಲ್ ಆಗುವ ಮೂಲಕ ಘಟನೆ ಬೆಳಕಿಗೆ ಬಂದಿದೆ.







