ನಂದಿಗ್ರಾಮ್ನಲ್ಲಿ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ, ಟಿಎಂಸಿಗೆ ಹಿನ್ನಡೆ

Photo:PTI
ಕೋಲ್ಕತ್ತಾ: 2021 ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು(Mamata Banerjee) ಸೋಲಿಸಿದ್ದ ಹಿಂದೊಮ್ಮೆ ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ನಂದಿಗ್ರಾಮ್ನಲ್ಲಿ(Nandigram) ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ(election to a cooperative body) ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
ಈ ಹಿಂದೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನ ಹಿಡಿತದಲ್ಲಿದ್ದ ಸಹಕಾರಿ ಸಂಸ್ಥೆ ಭೆಕುಟಿಯಾ ಸಮಬಾಯ್ ಕೃಷಿ ಸಮಿತಿಯ 12 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದೆ. ರವಿವಾರ ನಡೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ತೃಣಮೂಲ ಪಾಲಾಯಿತು.
ಕಳೆದ ತಿಂಗಳು ನಂದಿಗ್ರಾಮದ ಇನ್ನೊಂದು ಭಾಗದಲ್ಲಿ ನಡೆದಿದ್ದ ಚುನಾವಣೆಯಲ್ಲಿ ತೃಣಮೂಲ ದೊಡ್ಡ ಗೆಲುವು ಸಾಧಿಸಿತ್ತು. ನಂದಿಗ್ರಾಮ್-2 ಬ್ಲಾಕ್ನಲ್ಲಿ ತೃಣಮೂಲ 51 ಸ್ಥಾನಗಳನ್ನು ಗೆದ್ದಿತ್ತು, ಸಿಪಿಎಂ ಒಂದು ಮತ್ತು ಬಿಜೆಪಿ ಶೂನ್ಯ ಸಾಧಿಸಿತ್ತು. ಮಮತಾ ಬ್ಯಾನರ್ಜಿಯವರ ಪಕ್ಷವು ಕೊಂಟೈ ಮತ್ತು ಸಿಂಗೂರ್ನಲ್ಲಿಯೂ ಸಹ ಚುನಾವಣೆಯನ್ನು ಗೆದ್ದಿದೆ.
ರವಿವಾರ ನಡೆದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಹಿಂಸಾಚಾರದ ಆರೋಪಗಳನ್ನು ಮಾಡಿಕೊಂಡಿದ್ದವು. ತೃಣಮೂಲ ಹೊರಗಿನವರನ್ನು ಕರೆತಂದು ಮತದಾನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸುವೇಂದು ಅಧಿಕಾರಿ ವಿರುದ್ಧವೂ ತೃಣಮೂಲ ಅದೇ ರೀತಿಯ ಆರೋಪವನ್ನು ಮಾಡಿದೆ.







