ಮಲ್ಪೆ: ತೊಟ್ಟಂ ಕಡಲ ತೀರದಲ್ಲಿ ಬೂತಾಯಿ ಮೀನಿನ ರಾಶಿ!

ಮಲ್ಪೆ, ಸೆ.19: ತೊಟ್ಟಂ ಕದಿಕೆ ಕಡಲ ತೀರದಲ್ಲಿ ಇಂದು ಮಧ್ಯಾಹ್ನ ವೇಳೆ ರಾಶಿ ರಾಶಿ ಬೂತಾಯಿ ಮೀನುಗಳು ಕಂಡುಬಂದಿದ್ದು, ಅಲೆಗಳೊಂದಿಗೆ ತೀರಕ್ಕೆ ಬಂದು ಬೀಳುತ್ತಿದ್ದ ಮೀನುಗಳನ್ನು ಹೆಕ್ಕಲು ಸ್ಥಳೀಯರು ಮುಗಿಬಿದ್ದ ಬಗ್ಗೆ ವರದಿಯಾಗಿದೆ.
ಸಮುದ್ರದಲ್ಲಿ ಪಶ್ಚಿಮದ ಕಡೆಯಿಂದ ಪೂರ್ವದ ಕಡೆ ಸಾಗಿಬಂದ ಬೂತಾಯಿ ಮೀನುಗಳ ರಾಶಿ, ಅಲೆಗಳೊಂದಿಗೆ ತೀರಕ್ಕೆ ಬಂದು ಬಿದ್ದಿದ್ದು, ಈ ಬಗ್ಗೆ ಸುದ್ದಿ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ತೀರದ ಉದ್ದಕ್ಕೂ ಬಿದ್ದಿದ್ದ ಮೀನುಗಳನ್ನು ಹೆಕ್ಕಿ ಮನೆಗೆ ಕೊಂಡೊಯ್ದಿದ್ದಾರೆ. ಕೆಲವರು ಈ ಮೀನುಗಳನ್ನು ಮಾರಾಟ ಕೂಡ ಮಾಡಿದ್ದಾರೆ. ಹೀಗೆ ಸುಮಾರು 500 ಕೆ.ಜಿ. ಮೀನು ದೊರೆತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತೊಟ್ಟಂ ಪರಿಸರದಲ್ಲಿ ಈ ರೀತಿ ಮೊದಲ ಬಾರಿ ಕಂಡುಬಂದಿದ್ದು, ಈ ಹಿಂದೆ ಬೆಂಗ್ರೆ, ಪಡುಕೆರೆ, ಎರ್ಮಾಳು ಸೇರಿದಂತೆ ಹಲವು ಕಡೆ ಮೀನುಗಳು ತೀರಕ್ಕೆ ಬಂದು ಬಿದ್ದಿತ್ತು. ಇದು ಮೀನುಗಾರಿಕೆ ನಡೆಸುವ ದೋಣಿಗಳ ಇಂಜಿನ್ ಶಬ್ದಕ್ಕೆ ತೀರಕ್ಕೆ ಬಂದಿರಬಹುದು ಎಂದು ಮೀನುಗಾರರು ಅಭಿಪ್ರಾಯ ಪಟ್ಟಿದ್ದಾರೆ.
Next Story





