“ಹಿಜಾಬ್ ತನ್ನ ಧರ್ಮಕ್ಕೆ ಪೂರಕ ಎಂದು ಮುಸ್ಲಿಂ ಮಹಿಳೆ ಭಾವಿಸಿದರೆ ಅಲ್ಲ ಎಂದು ಯಾವುದೇ ಅಧಿಕಾರ ಹೇಳುವಂತಿಲ್ಲ”
ಸುಪ್ರೀಂ ಕೋಟ್‌ನಲ್ಲಿ ವಕೀಲ ದುಷ್ಯಂತ ದವೆ ವಾದ

ಹೊಸದಿಲ್ಲಿ,ಸೆ.19: ಮುಸ್ಲಿಂ ಮಹಿಳೆಯೋರ್ವಳು ಹಿಜಾಬ್ ಧರಿಸುವುದು ತನ್ನ ಧರ್ಮಾಚರಣೆಗೆ ಪೂರಕ ಎಂದು ಭಾವಿಸಿದರೆ ಯಾವುದೇ ಅಧಿಕಾರವಾಗಲೀ ನ್ಯಾಯಾಲಯವಾಗಲೀ ಅದನ್ನು ಅಲ್ಲಗಳೆಯುವಂತಿಲ್ಲ ಎಂದು ಹಿರಿಯ ನ್ಯಾಯವಾದಿ ದುಷ್ಯಂತ ದವೆ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ರಾಜ್ಯಸರಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ನಡೆಸುತ್ತಿದೆ.
ವಿಚಾರಣೆಯ ಏಳನೆಯ ದಿನವಾದ ಸೋಮವಾರ ಅರ್ಜಿದಾರರ ಪರ ಹಿರಿಯ ವಕೀಲ ದುಷ್ಯಂತ ದವೆಯವರು ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ,ಸಂವಿಧಾನ ಸಭೆಯ ಚರ್ಚೆಗಳು ಹಾಗು ಸಂವಿಧಾನದ 25ನೇ ವಿಧಿಯಡಿ ಧಾರ್ಮಿಕ ಹಕ್ಕುಗಳ ರಕ್ಷಣೆ ಕುರಿತು ವಿಸ್ತ್ರತ ವಾದಗಳನ್ನು ಮಂಡಿಸಿದರು.
ಮುಸ್ಲಿಂ ಬಾಲಕಿಯರು ಹಿಜಾಬ್ ಧರಿಸುವುದರಿಂದ ಯಾರದೇ ಭಾವನೆಗಳಿಗೆ ನೋವುಂಟಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದ ಅವರು,‘ಹಿಜಾಬ್ ನಮ್ಮ ಅನನ್ಯತೆಯಾಗಿದೆ ’ಎಂದು ಹೇಳಿದರು.
ಮೊದಲು,‘ಲವ್ ಜಿಹಾದ್’ ಕುರಿತು ಸಂಪೂರ್ಣ ವಿವಾದ ಮತ್ತು ಈಗ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಬಾಲಕಿಯರು ಹಿಜಾಬ್ ಧರಿಸುವುದಕ್ಕೆ ತಡೆ; ಇವು ಅಲ್ಪಸಂಖ್ಯಾತ ಸಮುದಾಯವನ್ನು ‘ಮೂಲೆಗುಂಪು ’ಮಾಡುವ ಮಾದರಿಯನ್ನು ಪ್ರತಿಬಿಂಬಿಸುತ್ತಿದೆ ಎಂದರು.
ವಿಧಿ 19 ಮತ್ತು 21ರ ವ್ಯಾಪ್ತಿಯ ವಿಸ್ತರಣೆಯೊಂದಿಗೆ ಸಂವಿಧಾನವನ್ನು ಉದಾರವಾಗಿ ವ್ಯಾಖ್ಯಾನಿಸಬೇಕು ಎಂದು ಪೀಠವನ್ನು ಆಗ್ರಹಿಸಿದ ದವೆ,ಧಾರ್ಮಿಕ ಹಕ್ಕು ವೈಯಕ್ತಿಕವಾಗಿದೆ,ಅದು ವ್ಯಕ್ತಿಗತ ಆಯ್ಕೆಯಾಗಿದೆ ಎಂದು ಪ್ರತಿಪಾದಿಸಿದರು.
ಭಾರತದಲ್ಲಿ ವಿವಿಧ ಧರ್ಮಗಳ ನಡುವೆ ಸಹಬಾಳ್ವೆಯು 5,000 ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಿದ ಅವರು,ಈ ದೇಶವು ಸುಂದರವಾದ ಸಂಸ್ಕೃತಿಯ ಮೇಲೆ,ಸಂಪ್ರದಾಯಗಳ ಮೇಲೆ ನಿರ್ಮಾಣಗೊಂಡಿದೆ. 5,000 ವರ್ಷಗಳಲ್ಲಿ ಅನೇಕ ಧರ್ಮಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಭಾರತವು ಹಿಂದು,ಬೌದ್ಧ ಮತ್ತು ಜೈನ ಧರ್ಮಗಳಿಗೆ ಜನ್ಮ ನೀಡಿದೆ. ತಾನಾಗಿಯೇ ಇಲ್ಲಿಗೆ ಬಂದ ಇಸ್ಲಾಮನ್ನು ನಾವು ಸ್ವೀಕರಿಸಿದ್ದೇವೆ. ಭಾರತವು ಬ್ರಿಟಿಷರನ್ನು ಹೊರತುಪಡಿಸಿ ಅದನ್ನು ಜಯಿಸದೆ ಜನರು ನೆಲೆಗೊಳ್ಳಲು ಇಲ್ಲಿಗೆ ಬಂದಿದ್ದ ಏಕೈಕ ಸ್ಥಳವಾಗಿದೆ. ಈ ದೇಶವು ಉದಾರ ಸಂಪ್ರದಾಯದ ಮೇಲೆ,ಏಕತೆ ಮತ್ತು ವಿವಿಧತೆಯಲ್ಲಿ ನಿರ್ಮಾಣಗೊಂಡಿದೆ ’ಎಂದು ದವೆ ಹೇಳಿದರು.
ಈ ಪ್ರಕರಣವು ಮೇಲ್ನೋಟಕ್ಕೆ ಸಮವಸ್ತ್ರದ ಕುರಿತಾಗಿದ್ದರೂ ಅದು ನಿಮಗೆ ಅವಕಾಶವಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಹೇಗೆ ಹೇಳುವುದು ಎನ್ನುವುದರ ಕುರಿತೂ ಆಗಿದೆ ಎಂದು ವಾದಿಸಿದ ಅವರು,ಈ ಪ್ರಕರಣವು ನಿಜಕ್ಕೂ ಕಾನೂನಿನ ದುರುಪಯೋಗದ ಕುರಿತಾಗಿದೆ. ನಾವೇನು ಹೇಳುತ್ತೇವೋ ಅದನ್ನೇ ನೀವು ಮಾಡಬೇಕು ಎಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಹೇಳುವ ಕುರಿತಾಗಿದೆ ಎಂದರು.
ವಿಚಾರಣೆಯು ಮಂಗಳವಾರ ಪೂರ್ವಹ್ನ 11 ಗಂಟೆಯಿಂದ ಮತ್ತೆ ಮುಂದುವರಿಯಲಿದೆ.







