ಸೆ.24ರಂದು ದಸಂಸದಿಂದ ಪ್ರತಿಭಟನಾ ಜಾಥಾ

ಉಡುಪಿ, ಸೆ.20: ಮೀಸಲಾತಿ ವಿರೋಧಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಾತಿವಾದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ದ.ಸಂ.ಸ. ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಜಾಥಾ ಹಾಗೂ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಸೆ.24ರಂದು ಅಪರಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಪೂನಾ ಒಪ್ಪಂದದಿಂದ ದಲಿತರಿಗೆ ಅನ್ಯಾಯ ಮತ್ತು ಮೇಲ್ವರ್ಗದವರಿಗೆ ಯಾವುದೇ ಮಾನದಂಡ ವಿಧಿಸದೆ ಶೇ.10 ಮೀಸಲಾತಿ ನಿಗದಿಪಡಿಸಿದಾಗ ವಿರೋಧ ವ್ಯಕ್ತಪಡಿಸದೆ ಇದೀಗ ದಲಿತರ ಮೀಸಲಾತಿ ಬಗ್ಗೆ ಅಪಸ್ವರ ಎತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ದಲಿತ ವಿರೋಧಿ ನೀತಿ ಮತ್ತು ದಲಿತರ ವಿದ್ಯಾರ್ಥಿಗಳಿಗೆ ಯಾವುದೇ ಉಪಯೋಗವಿಲ್ಲದ ವೇದಗಣಿತ ಕಲಿಸಲು ದಲಿತರ ಮೀಸಲು ಅನುದಾನ 60 ಕೋಟಿ ವೆಚ್ಚ ಮಾಡಲು ನೀಡಿರುವ ಆದೇಶವನ್ನು ಖಂಡಿಸಿ, ಜಾತಿವಾದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಅಜ್ಜರಕಾಡು ಹುತಾತ್ಮರ ಸ್ಮಾರಕದಿಂದ ಬೋರ್ಡ್ ಹೈಸ್ಕೂಲ್‌ವರೆಗೆ ಪ್ರತಿಭಟನಾ ಜಾಥಾ ಮತ್ತು ಇವರ ಪ್ರತಿಕೃತಿ ದಹಿಸಲಾಗುವುದು ಎಂದು ದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ತಿಳಿಸಿದ್ದಾರೆ.





