ಸ್ವಚ್ಛ ಸಾಗರ ಅಭಿಯಾನ: 200 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

ಉಡುಪಿ, ಸೆ.20: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಸಾಗರ ದಿನದ ಅಂಗವಾಗಿ ಕಡೆಕಾರು ಗ್ರಾಮ ಪಂಚಾಯತ್ ಹಾಗೂ ಟೀಮ್ ನೇಷನ್ ಪಸ್ಟ್ ಸಹಯೋಗದೊಂದಿಗೆ ಪಡುಕರೆ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
30 ಎನ್ನೆಸ್ಸೆಸ್ ಸ್ವಯಂ ಸೇವಕರು, ೨೫ ಮಂದಿ ಟೀಮ್ ನೇಷನ್ ಪಸ್ಟ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು ಸುಮಾರು 200 ಕೆ.ಜಿ.ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು. ಸಂಗ್ರಹಿಸಿದ ತ್ಯಾಜ್ಯವನ್ನು ಗ್ರಾಪಂ ತ್ಯಾಜ್ಯ ನಿರ್ವಹಣಾ ವಾಹನದ ಮೂಲಕ ಸಾಗಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮಿ ಕೆ., ಸಹಯೋಜನಾಧಿಕಾರಿಗಳಾದ ಡಾ.ಯೋಗೀಶ್ ಆಚಾರ್ಯ, ಡಾ.ಶ್ರೀನಿಧಿ ದನ್ಯ, ಡಾ.ಮಹಾಲಕ್ಷ್ಮಿ ಎಂ.ಎಸ್, ಗ್ರಾಮ ಪಂಚಾಯತ್ ಪಿ.ಡಿ.ಓ ಸಿದ್ಧೇಶ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಸದಸ್ಯ ವಸಂತ ಕುಂದರ್, ಟೀಮ್ ನೇಷನ್ ಫಸ್ಟ್‌ನ ಅಧ್ಯಕ್ಷ ಸೂರಜ್, ಡಾ.ಅತುಲ್ ಮೊದಲಾದವರು ಉಪಸ್ಥಿತರಿದ್ದರು.





