ದ.ಕ.ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ: ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ಇತ್ತೀಚಿಗೆ ದ.ಕ. ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಗಳ ತನಿಖೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೀಡಬೇಕಾದ ಸಾಂತ್ವನ ಮತ್ತು ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿಯನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದ ಎದುರು ಮಂಗಳವಾರ ‘ಮೌನ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಹತ್ಯೆಯಾದ ಫಾಝಿಲ್ ಅವರ ತಂದೆ ಫಾರೂಕ್ ಹಾಗೂ ಹತ್ಯೆಯಾದ ಮಸೂದ್ ಅವರ ತಾಯಿ ಸಾರಮ್ಮ ಅಂಬೇ ಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೌನ ಪ್ರತಿಭಟನೆಗೆ ಚಾಲನೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ, ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಕೋಮು ದ್ವೇಷದ ಎಲ್ಲಾ ಕೊಲೆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ದಳದ (ಎಸ್ ಐ ಟಿ)ಮೂಲಕ ತನಿಖೆ ಗೆ ಒಳಪಡಿಸುವುದು ಸೂಕ್ತ ಎಂದರು.
ಪ್ರತಿಭಟನಾ ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾದ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡ ರಾದ ಕೋಡಿಜಾಲ್ ಇಬ್ರಾಹಿಂ, ಎಂ.ಎಸ್.ಮುಹಮ್ಮದ್, ಬಿ.ಎಚ್.ಅಬ್ದುಲ್ ಖಾದರ್, ಸುರೇಶ್ ಬಲ್ಲಾಳ್, ಮಮತಾ ಗಟ್ಟಿ, ಮಿಥುನ್ ರೈ, ಮುಹಮ್ಮದ್ ಮೋನು, ಪುರುಷೋತ್ತಮ ಚಿತ್ರಾಪುರ, ಪ್ರಕಾಶ್ ಸಾಲ್ಯಾನ್, ಸಲೀಂ, ಟಿ.ಕೆ.ಸುಧೀರ್ ಮನಪಾ ನದಸ್ಯರಾದ ನವೀನ್ ಡಿ ಸೋಜ, ಅಬ್ದುಲ್ ರವೂಫ್, ಲತೀಫ್ ಕಂದಕ್ ಮೊದಲಾದವರು ಉಪಸ್ಥಿತರಿದ್ದರು.











