ಮಹಿಳೆಯರ, ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಅಗತ್ಯ ಕ್ರಮ: ಸಚಿವ ಆಚಾರ್ ಹಾಲಪ್ಪ

ಬೆಂಗಳೂರು, ಸೆ.20: ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2021-22ನೆ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಟ ನಿವಾರಣೆ ಯೋಜನೆಗೆ ಹಂಚಿಕೆಯಾದ 30 ಲಕ್ಷ ರೂ.ಗಳಲ್ಲಿ ಕೇವಲ 2.50 ಲಕ್ಷ ರೂ. ಮಾತ್ರವೇ ಡಿಸೆಂಬರ್ 2021 ಅಂತ್ಯದವರೆಗೆ ವೆಚ್ಚವಾಗಿರುವುದು ಸರಕಾರದ ಗಮನಕ್ಕೆ ಬಂದಿದ್ದು, 2.50 ಲಕ್ಷದಲ್ಲಿ 2 ಲಕ್ಷ ರೂ.ಗಳನ್ನು ಹುಬ್ಬಳ್ಳಿ ಧಾರವಾಡದಲ್ಲಿ ನಡೆದ ಗ್ರಾಮೀಣ ಕುಶಲಕರ್ಮಿ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಹಾಗೂ 50 ಸಾವಿರ ರೂ.ಗಳನ್ನು ಬೆಂಗಳೂರು (ನಗರ) ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ತಯಾರಿಸಿರುವ ಕ್ರಮಬದ್ಧ ಕಾರ್ಯ ವಿಧಾನ ಮಾರ್ಗಸೂಚಿ ಕುರಿತಂತೆ ಒಂದು ದಿನದ ಕಾರ್ಯಾಗಾರಕ್ಕೆ ಬಳಸಲಾಗಿದೆ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆ ನಿವಾರಣೆ ಯೋಜನೆಯಡಿ ಅನುದಾನ 30ಲಕ್ಷ ರೂ.ಗಳನ್ನು ಮಾರ್ಚ್ 2022ರ ಅಂತ್ಯಕ್ಕೆ ಸಂಪೂರ್ಣ ವೆಚ್ಚ ಮಾಡಲಾಗಿದೆ. ಇಲಾಖೆಯು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಯನ್ನು ಸಿದ್ಧಪಡಿಸಿ 39 ಸಾವಿರ ಪ್ರತಿಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ವಿತರಿಸಲಾಗಿದೆ ಎಂದರು.
ಸಾಗಾಣಿಕೆಗೆ ತುತ್ತಾಗಬಹುದಾದ ಹಾಗೂ ಸಾಗಾಣಿಕೆಗೆ ಒಳಪಟ್ಟ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ, ಪುನರ್ವಸತಿಗಾಗಿ ಕೇಂದ್ರ ಪುರಸ್ಕøತ ಉಜ್ವಲ ಯೋಜನೆಯನ್ನು 11 ಜಿಲ್ಲೆಗಳಲ್ಲಿ 15 ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕೈಪಿಡಿ, ಬಿತ್ತಿಪತ್ರ, ಸಾಕ್ಷ್ಯಚಿತ್ರ ಇತ್ಯಾದಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.







