ತನ್ನ ಸ್ವಾರ್ಥಕ್ಕಾಗಿ ಬಿಲ್ಲವ ಸಮಾಜವನ್ನು ಬಲಿ ಕೊಡುತ್ತಿರುವ ಹರಿಕೃಷ್ಣ ಬಂಟ್ವಾಳ: ಬೇಬಿ ಕುಂದರ್ ಆರೋಪ

ಬೇಬಿ ಕುಂದರ್
ಮಂಗಳೂರು, ಸೆ.20: ರಾಜಕೀಯ ಜೀವನ ಉದ್ದಕ್ಕೂ ಕಳಂಕವನ್ನೇ ಮಾಡಿಕೊಂಡು ಬಂದಿರುವ ಪಕ್ಷಾಂತರಿ ಹರಿಕೃಷ್ಣ ಬಂಟ್ವಾಳ ಅವರು, ತನ್ನ ಅಧಿಕಾರದ ಸ್ವಾರ್ಥಕ್ಕಾಗಿ ಅನಾದಿ ಕಾಲದಿಂದಲೂ ಒಗ್ಗಟ್ಟಾಗಿದ್ದ ಬಿಲ್ಲವ ಸಮಾಜವನ್ನು ಒಡೆಯುವ ಹುನ್ನಾರಕ್ಕೆ ಪ್ರಸಕ್ತ ಕೈ ಹಾಕಿದ್ದಾರೆ ಎಂದು ಬಿಲ್ಲವ ಮುಖಂಡ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜದ ಪವಿತ್ರ ಸ್ಥಳ, ಕೋಟಿ ಚೆನ್ನಯ್ಯರ ಜನ್ಮ ನೆಲಕ್ಕೆ ನುಗ್ಗಿ ಪಡುಮಲೆ, ಗೆಜ್ಜೆಗಿರಿ ಎಂದು ಬೇರೆ ಬೇರೆ ಮಾಡಿ ಬಿಲ್ಲವ ಸಮಾಜದ ನಡುವೆ ಕಂದಕವನ್ನು ಸೃಷ್ಟಿಸಿದ್ದಾರೆ. ಅಧಿಕಾರ, ಸ್ವ ಸ್ವಾರ್ಥಕ್ಕಾಗಿ ಹಾಗೂ ಯಾರನ್ನೋ ಓಲೈಸಲು ಅವರು ಇಡೀ ಬಿಲ್ಲವ ಸಮಾಜವನ್ನು ಒಡೆದು ಹಾಕಲು ಹಿಂದೆ ಮುಂದೆ ನೋಡುತ್ತಿಲ್ಲ ಎಂದು ಅವರು ಆರೋಪಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಬೇಕಾದ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಮಂಗಳೂರಿನ ಸಭಾಭವನಕ್ಕೆ ಸೀಮಿತಗೊಳಿಸಿ ನಾರಾಯಣ ಗುರುಗೆ ಅವಮಾನ ಮಾಡಿದ್ದಾರೆ. ಆ ದಿನ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ನಾರಾಯಣ ಗುರು ಬಗ್ಗೆ ಯಾವುದೇ ಮಾತುಗಳನ್ನಾಡದೆ ಅಪಮಾನ ಮಾಡಿದ್ದಾರೆ. ಇದನ್ನು ಖಂಡಿಸಿದವರ ವಿರುದ್ಧ ವೈಯಕ್ತಿಯ ದಾಳಿ ನಡೆಸುವ ಹರಿಕೃಷ್ಣ ಬಂಟ್ವಾಳ ಅವರ ಮನಸ್ಥಿತಿ ಏನು? ಅವರು ಯಾರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಹರಿಕೃಷ್ಣ ಬಂಟ್ವಾಳ 1984ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ದೇಶದ ಹಾಗೂ ಬಿಲ್ಲವ ಸಮಾಜದ ಪ್ರಚಂಡ ನಾಯಕ ಜನಾರ್ದನ ಪೂಜಾರಿ ಅವರಿಗೆ ಶನಿ ಹಿಡಿದಿದೆ. ಅವರು ಜನಾರ್ದನ ಪೂಜಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದವರ ಜೊತೆ ಒಳ ಒಪ್ಪಂದ ಮಾಡಿರುವ ಬಗ್ಗೆ ಅನುಮಾನವೂ ಇದೆ. ಪೂಜಾರಿ ವಿರುದ್ಧ ಸ್ಪರ್ಧಿಸಿದ, ಅವರ ಸೋಲಿಗೆ ಶ್ರಮಿಸಿದವರನ್ನು ತನ್ನ ಮನೆಗೆ ಕರೆಸಿ ಅವರು ತುಂಡಿನ ಊಟ ಬಡಿಸಿ ಸಂತೋಷ ಪಡುತ್ತಿದ್ದಾರೆ ಎಂದರು.
ಅಧಿಕಾರದ ಸ್ವಾರ್ಥಕ್ಕಾಗಿ ಹರಿಕೃಷ್ಣ ಬಂಟ್ವಾಳ ಯಾವ ಮಟ್ಟಕ್ಕೂ ಇಳಿಯಲೂ ಸಿದ್ಧರಿದ್ದಾರೆ. ಯಾರನ್ನು ಬೇಕಾದರೂ ಓಲೈಸುತ್ತಿದ್ದಾರೆ. ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರು ಜಯಂತಿ ನಡೆಸಿದರೆ ನೂರು ಜನ ಸೇರುವುದಿಲ್ಲ ಎಂದು ಫತ್ವಾ ಹೊರಡಿಸಿ ಖಾಸಗಿ ಹಾಲ್ ನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಇದು ಅವರು ದೇವಸ್ಥಾನದ ಪಾವಿತ್ರತೆಗೆ ಮಾಡಿರುವ ಅವಮಾನ. ಈ ಬಗ್ಗೆ ಅವರು ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ನಾರಾಯಣ ಗುರು ಅವರಿಗೆ ರಾಜ್ಯ ಸರಕಾರ ಮಾಡಿರುವ ಅವಮಾನದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಬಿ.ರಮಾನಾಥ ರೈ ವಿರುದ್ಧ ಹರಿಕೃಷ್ಣ ಬಂಟ್ವಾಳ ಅವರು ವೈಯಕ್ತಿಕ ದಾಳಿ ನಡೆಸಿದ್ದಾರೆ. ರೈ ಅವರ ವಯಸ್ಸು, ಆರೋಗ್ಯದ ಬಗ್ಗೆ ಹಗುರವಾಗಿ ಮತ್ತು ಕೀಳು ಮಟ್ಟದಲ್ಲಿ ನಿಂದಿಸಿದ್ದಾರೆ. ಇದು ಅವರ ಮನಸ್ಥಿತಿ ಮತ್ತು ಚಾರಿತ್ರ್ಯವನ್ನು ಸಮಾಜಕ್ಕೆ ತೋರಿಸುತ್ತದೆ. ಗ್ರಾಮ ಪಂಚಾಯತ್ ನಲ್ಲಿ ಗೆಲ್ಲಲು ಸಾಧ್ಯವಿಲ್ಲದ ಹರಿಕೃಷ್ಣ ಬಂಟ್ವಾಳ, ರಮಾನಾಥ ರೈ ಅವರ ಟಿಕೆಟ್, ಗೆಲುವಿನ ಬಗ್ಗೆ ಮಾತನಾಡುವುದು ಹಾಸ್ಯಸ್ಪದ ಎಂದು ಅವರು ಹೇಳಿದರು.
2016ರ ವಿಧಾನ ಪರಿಷತ್ ಚುನಾವಣೆಯಲ್ಲಿ ಹರಿಕೃಷ್ಣ ಬಂಟ್ವಾಳ ಅವರಿಗೆ ಟಿಕೆಟ್ ಸಿಗುವಂತಾಗಲು ರಮಾನಾಥ ರೈ ಅಪಾರ ಶ್ರಮಪಟ್ಟಿದ್ದಾರೆ. ಈ ಬಗ್ಗೆ ಅವರು ಕೆಪಿಸಿಸಿಗೆ ಪತ್ರ ಕೂಡಾ ಬರೆದಿದ್ದಾರೆ. ಇದು ಇಡೀ ಬಿಲ್ಲವ ಸಮಾಜಕ್ಕೆ ಗೊತ್ತಿರುವ ಸತ್ಯ. ಕೊನೆಗೆ ಹೈ ಕಮಾಂಡ್ ತೀರ್ಮಾನದಂತೆ ಟಿಕೆಟ್ ಬೇರೆ ವ್ಯಕ್ತಿಗೆ ಟಿಕೆಟ್ ದೊರಕಿತು. ಈ ಕಾರಣಕ್ಕೆ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್, ಅವರ ಶ್ರೀಮತಿ, ರಮಾನಾಥ ರೈ ವಿರುದ್ಧ ಅವರು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಆ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ 127 ಮತಗಳನ್ನು ಪಡೆಯುವ ಮೂಲಕ ಬಂಡವಾಳವನ್ನು ಜಗಜ್ಜಾಹಿರಾತು ಮಾಡಿದ್ದಾರೆ ಎಂದರು.
ಹರಿಕೃಷ್ಣ ಬಂಟ್ವಾಳ ಬಂಡಾಯವಾಗಿ ಸ್ಪರ್ಧಿಸಿದಾಗ ಜನಾರ್ದನ ಪೂಜಾರಿ ಕೂಡಾ ವಿರೋಧ ವ್ಯಕ್ತಪಡಿಸಿದ್ದರು. ಅವನ ರಾಜಕೀಯ ಜೀವನ ಇಲ್ಲಿಗೆ ಮುಗಿಯುತ್ತದೆ ಎಂದಿದ್ದರು. ಅದೇ ಪರಿಸ್ಥಿತಿಯಲ್ಲಿ ಅವರೀಗ ಇದ್ದಾರೆ. ಅಧಿಕಾರದ ಸ್ವಾರ್ಥಕ್ಕಾಗಿ ಯಾರನ್ನೋ ಓಲೈಸಲು ಬಿಲ್ಲವ ಸಮಾಜವನ್ನೇ ಬಲಿ ಕೊಡುತ್ತಿದ್ದಾರೆ. ಕಿಯೋನಿಕ್ಸ್ ಅಧ್ಯಕ್ಷರಾದಾಗ ಅವರು ಉದ್ಯೋಗ ಮೇಳ ನಡೆಸುತ್ತೇನೆ, ಪಾರ್ಕ್ ನಿರ್ಮಿಸುತ್ತೇನೆ, ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು. ಆದರೆ ಎರಡು ವರ್ಷದ ಅವಧಿಯಲ್ಲಿ ಇದನ್ನು ಯಾವುದೂ ಮಾಡದ ಅವರು 2 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ತನ್ನ ಮನೆಯನ್ನು ನವೀಕರಣ ಮಾಡಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಇದೆ ಎಂದರು.
ಟಿಕೆಟ್ ಲಾಭಿ, ಬಂಡಾಯ, ಪಕ್ಷ ವಿರೋಧ ಚಟುವಟಿಕೆಯ ಕಾರಣದಿಂದ 1983ರಲ್ಲಿ ಜನಸಂಘದಿಂದ ಹೊರದಬ್ಬಲ್ಪಟ್ಟ ಅವರು, ಪ್ರಸಕ್ತ ಆ ಪಕ್ಷದಲ್ಲಿ ತನ್ನ ಅಸ್ಥಿತ್ವ ಉಳಿಸಲು ಬಿಲ್ಲವ ಸಮಾಜವನ್ನು ಒಡೆಯುತ್ತಿದ್ದಾರೆ. ಬಿಲ್ಲವ ನಾಯಕರು, ಯುವಕರನ್ನು ಬಲಿ ಕೊಡುತ್ತಿದ್ದಾರೆ. ರಮಾನಾಥ ರೈ ವಿರುದ್ಧ ಕೀಳು ಮಟ್ಟದಲ್ಲಿ ಮಾತನಾಡುವ ಹರಿಕೃಷ್ಣ ಬಂಟ್ವಾಳ ಗಾಜಿನ ಮನೆಯಲ್ಲಿ ಕೂತು ಆರ್ಸಿಸಿ ಮನೆಗೆ ಕಲ್ಲು ಹೊಡೆಯುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ನೀರಜ್ ಚಂದ್ರ ಪಾಲ್, ಡಾ. ರಾಜಾರಾಮ್, ಉಮೇಶ್ ದಂಡಕೇರಿ, ಯಶವಂತ ಪ್ರಭು, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.