ಭೋಪಾಲ ಅನಿಲ ದುರಂತ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಕುರಿತು ಕೇಂದ್ರದ ನಿಲುವು ಕೋರಿದ ಸುಪ್ರೀಂಕೋರ್ಟ್

ಹೊಸದಿಲ್ಲಿ,ಸೆ.20: ಮನಮೋಹನ್ ಸಿಂಗ್ ಸರಕಾರವು 2010ರಲ್ಲಿ ಭೋಪಾಲ ಅನಿಲ ದುರಂತದ ಸಂತ್ರಸ್ತರಿಗೆ 1.2 ಶತಕೋಟಿ ಡಾ.(ಆಗ 7413 ರೂ.) ಹೆಚ್ಚುವರಿ ಪರಿಹಾರಕ್ಕಾಗಿ ನಿರ್ದೇಶನ ಕೋರಿ ಡವ್ ಕೆಮಿಕಲ್ ಕಂಪನಿ (ಟಿಡಿಸಿಸಿ) ಮತ್ತು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅಥವಾ ಪರಿಹಾರಾತ್ಮಕ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಅ.11ಕ್ಕೆ ಮುಂದೂಡಿದೆ. ಈ ವಿಷಯದಲ್ಲಿ ತನ್ನ ನಿಲುವನ್ನು ತಿಳಿಸುವಂತೆ ಅದು ಮೋದಿ ಸರಕಾರಕ್ಕೆ ಸೂಚಿಸಿದೆ.
ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು, ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಸರಕಾರದಿಂದ ಸೂಚನೆಗಳನ್ನು ಪಡೆದುಕೊಳ್ಳಲು ಸಮಯಾವಕಾಶವನ್ನು ನೀಡುವ ನಿಟ್ಟಿನಲ್ಲಿ ಕ್ಯುರೇಟಿವ್ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
‘ನಾವು ಸರಕಾರದ ನಿಲುವಿನ ಬಗ್ಗೆಯೂ ಸೂಚನೆಗಳನ್ನು ಪಡೆದುಕೊಳ್ಳಬಹುದು,ಈ ವಿಷಯವು ದಿಢೀರನೆ ಪ್ರಸ್ತಾವಗೊಂಡಿರುವುದರಿಂದ ಸರಕಾರದೊಡನೆ ಸಮಾಲೋಚಿಸಲು ನಾವು ಬಯಸಿದ್ದೇವೆ ’ ಎಂದು ಮೆಹ್ತಾ ತಿಳಿಸಿದರು.
ಅನಿಲ ಸೋರಿಕೆಗಾಗಿ ವಿಚಾರಣೆಗೊಳಗಾಗಿದ್ದ ಆರೋಪಿಗಳಿಗೆ ಶಿಕ್ಷೆಯಲ್ಲಿ ಸಡಿಲಿಕೆಯ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಕೇಂದ್ರವು 2010ರಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ 1989ರ ಇತ್ಯರ್ಥ ಒಪ್ಪಂದದಲ್ಲಿ ಸೂಚಿಸಲಾಗಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿತ್ತು. ಕೇಂದ್ರ ಸರಕಾರವು ಯುಸಿಸಿ ಮತ್ತು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿ.ಜೊತೆ ಮತುಕತೆಗಳ ಬಳಿಕ ಈ ಒಪ್ಪಂದವನ್ನು ಮಾಡಿಕೊಂಡಿತ್ತು ಮತ್ತು ಸರ್ವೋಚ್ಚ ನ್ಯಾಯಾಲಯವು ಈ ಒಪ್ಪಂದವನ್ನು ಅನುಮೋದಿಸಿತ್ತು.







