ಅ.18ರಂದು ಟೋಲ್ ಗೇಟ್ ತೆರವು ನೇರ ಕಾರ್ಯಾಚರಣೆ ನಡೆಸಲು ಸಮಿತಿ ಸಭೆಯಲ್ಲಿ ನಿರ್ಧಾರ

ಸುರತ್ಕಲ್, ಸೆ.20 : ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಭೆಯು ಸುರತ್ಕಲ್ ನ ಸ್ನೇಹ ಹೊಟೇಲ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಟೋಲ್ ಗೇಟ್ ತೆರವು ದಿನಾಂಕ ಪ್ರಕಟಿಸಲು ಒತ್ತಾಯಿಸಿ ಇತ್ತೀಚೆಗೆ ನಡೆದ ಸಾಮೂಹಿಕ ಧರಣಿ ಹಾಗೂ ಟೋಲ್ ತೆರವು ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರಕಾರ ಸದನದಲ್ಲಿ ಪ್ರಕಟಿಸಿದ ಹೇಳಿಕೆಗಳ ಕುರಿತು ಸಭೆಯು ಚರ್ಚಿಸಿತು.
ಸಾಮೂಹಿಕ ಧರಣಿಯ ಯಶಸ್ಸಿಗೆ ಕಾರಣಕರ್ತರಾದ ಸಮಾನ ಮನಸ್ಕ ಸಂಘಟನೆಗಳು ಹಾಗೂ ಜನತೆಗೆ ಸಭೆಯು ಧನ್ಯವಾದಗಳನ್ನು ಸಮರ್ಪಿಸಿತು. ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರಕಾರ ದಿನಾಂಕ ಪ್ರಕಟಿಸಲು ಮುಂದಾಗದಿರುವುದರ ಕುರಿತು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಹೋರಾಟ ತೀವ್ರಗೊಳಿಸದಿದ್ದಲ್ಲಿ ತೆರವು ಪ್ರಕ್ರಿಯೆ ನಿಧಾನಗೊಳ್ಳುವ, ನನೆಗುದಿಗೆ ಬೀಳುವ ಸಾಧ್ಯತೆ ಕುರಿತು ಸಭೆಯಲ್ಲಿ ಆತಂಕ ವ್ಯಕ್ತವಾಯಿತು. ಕೊಟ್ಟ ಮಾತಿನಂತೆ ತಕ್ಷಣ ಟೋಲ್ ಸಂಗ್ರಹ ಸ್ಥಗಿತಗೊಳಸುವಂತೆ ರಾಜ್ಯ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಸಭೆ ಆಗ್ರಹಿಸಿತು.
ಈ ಹಿನ್ನೆಲೆಯಲ್ಲಿ ಸಾಮೂಹಿಕ ಧರಣಿಯ ಘೋಷಣೆಯಂತೆ ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆ ನಡೆಸಲು ದೃಢ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ವಹಿಸಿದ್ದರು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಹಿರಿಯ ದಲಿತ ನಾಯಕ ಎಂ. ದೇವದಾಸ್, ಮಾಜಿ ಕಾರ್ಪೊರೇಟರ್ ರೇವತಿ ಪುತ್ರನ್, ಸಾಮಾಜಿಕ ಮುಂದಾಳು ಎಮ್. ಜಿ. ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಲ್ಪಿ ಡಿ ಕೋಸ್ತ ಹೆಜಮಾಡಿ, ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಕುಳಾಯಿ ನಾಗರಿಕ ಸಮಿತಿಯ ಗಂಗಾಧರ ಬಂಜನ್, ಡಿವೈಎಫ್ಐ ನ ಬಿ. ಕೆ. ಇಮ್ತಿಯಾಝ್, ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ.ಕೆ., ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬರ್ನಾಡ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಸತೀಶ್ ಕೋಟ್ಯಾನ್, ಅಬ್ದುಲ್ ಅಝೀಝ್, ನಿಸಾರ್ ಬಜ್ಪೆ, ಸಿರಾಜ್ ಬಜ್ಪೆ, ಹೋರಾಟ ಸಮಿತಿಯ ಹರೀಶ್ ಪೇಜಾವರ, ರಾಜೇಶ್ ಶೆಟ್ಟಿ ಪಡ್ರೆ, ರಮೇಶ್ ಟಿ.ಎನ್., ರಾಜೇಶ್ ಪೂಜಾರಿ ಕುಳಾಯಿ, ಸುಧೀರ್ ಕರ್ಕೇರ ಹೆಜಮಾಡಿ, ಹಫೀಝ್ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.