ಪ್ರತೀ 4 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾವು: ವರದಿ

ಜಿನೆವಾ, ಸೆ.20: ಪ್ರತೀ ನಾಲ್ಕು ಸೆಕೆಂಡ್‌ಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿರುವುದಾಗಿ ಅಂದಾಜಿಸಲಾಗಿದೆ ಎಂದು 200ಕ್ಕೂ ಅಧಿಕ ಎನ್‌ಜಿಒಗಳು ಮಂಗಳವಾರ ಎಚ್ಚರಿಕೆ ನೀಡಿದ್ದು ಅಪಾಯಕಾರಿಯಾಗಿರುವ ಜಾಗತಿಕ ಹಸಿವಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ನಿರ್ಣಾಯಕ ಅಂತರಾಷ್ಟ್ರೀಯ ಕ್ರಮವನ್ನು ಒತ್ತಾಯಿಸಿವೆ. ತೀವ್ರವಾಗಿ ಉಲ್ಬಣಗೊಳ್ಳುತ್ತಿರುವ ಹಸಿವಿನ ಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಮತ್ತು ಕ್ರಮಕ್ಕೆ ಶಿಫಾರಸು ಸೂಚಿಸಿ 75 ದೇಶಗಳ ಸಂಘಟನೆಗಳು ಬಹಿರಂಗ ಪತ್ರಕ್ಕೆ ಸಹಿ ಹಾಕಿವೆ ಎಂದು ಎನ್‌ಜಿಒ(ಸರಕಾರೇತರ ಸಂಘಟನೆ) ಹೇಳಿದ್ದು, 345 ಮಿಲಿಯನ್ ಜನತೆ ಈಗ ತೀವ್ರ ಹಸಿವಿನಿಂದ ಬಳಲುತ್ತಿದ್ದು ಇದು 2019ರಿಂದ ದ್ವಿಗುಣಗೊಂಡಿದೆ ಎಂದು ಎಚ್ಚರಿಸಿದೆ.
21ನೇ ಶತಮಾನದಲ್ಲಿ ಮತ್ತೊಮ್ಮೆ ಕ್ಷಾಮದ ಪರಿಸ್ಥಿತಿಗೆ ಅವಕಾಶ ನೀಡುವುದಿಲ್ಲ ಎಂಬ ಜಾಗತಿಕ ಮುಖಂಡರ ಭರವಸೆಯ ಹೊರತಾಗಿಯೂ ಕ್ಷಾಮವು ಮತ್ತೊಮ್ಮೆ ಸೊಮಾಲಿಯಾದಲ್ಲಿ ಕಾಣಿಸಿಕೊಂಡಿದೆ. ವಿಶ್ವದಾದ್ಯಂತ 45 ದೇಶಗಳಲ್ಲಿ 50 ಮಿಲಿಯನ್ ಜನತೆ ಉಪವಾಸ ಬೀಳುವ ದುರಂತದ ಅಂಚಿಗೆ ತಲುಪಿದ್ದಾರೆ ಎಂದು ವರದಿ ಹೇಳಿದೆ. ಪ್ರತೀ ದಿನ ಹಸಿವಿನಿಂದ ಸುಮಾರು 19,700 ಮಂದಿ ಸಾಯುತ್ತಿರುವುದಾಗಿ ಅಂದಾಜಿಸಿದ್ದು ಇದರರ್ಥ ಪ್ರತೀ 4 ಸೆಕೆಂಡ್‌ಗೆ ಓರ್ವ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದಾನೆ. ಕೃಷಿಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ಯಂತ್ರೋಪಕರಣ, ಕೊಯ್ಲು ತಂತ್ರಗಳಿದ್ದರೂ ನಾವು ಇಂದಿಗೂ 21ನೇ ಶತಮಾನದಲ್ಲಿ ಕ್ಷಾಮದ ಬಗ್ಗೆ ಮಾತನಾಡುತ್ತಿರುವುದು ಅಸಹನೀಯವಾಗಿದೆ ಎಂದು ಯೆಮನ್ ಫ್ಯಾಮಿಲಿ ಕ್ಯಾರ್ ಅಸೋಸಿಯೇಷನ್‌ನ ಮೊಹಾನ್ನ ಅಹ್ಮದ್ ಅಲಿ ಹೇಳಿದ್ದಾರೆ.
ಇದು ಒಂದು ದೇಶ ಅಥವಾ ಒಂದು ಖಂಡದ ಕುರಿತ ಸಮಸ್ಯೆಯಲ್ಲ ಮತ್ತು ಹಸಿವು ಎಂದಿಗೂ ಒಂದೇ ಕಾರಣವನ್ನು ಹೊಂದಿರುವುದಿಲ್ಲ. ಇದು ಇಡೀ ಮಾನವಕುಲದ ಅನ್ಯಾಯದ ಕುರಿತ ವಿಷಯವಾಗಿದೆ. ತಕ್ಷಣ ಜೀವರಕ್ಷಕ ಆಹಾರ ಮತ್ತು ದೀರ್ಘಾವಧಿಯ ಬೆಂಬಲ ಒದಗಿಸುವುದರ ಬಗ್ಗೆ ಗಮನ ಕೇಂದ್ರೀಕರಿಸಲು ಇನ್ನು ವಿಳಂಬಿಸುವಂತಿಲ್ಲ. ಈ ಮೂಲಕ ಜನತೆ ತಮ್ಮ ಭವಿಷ್ಯದ ಜವಾಬ್ದಾರಿಯ ಬಗ್ಗೆ ನಿರ್ಧರಿಸಬಹುದು ಮತ್ತು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಹಾರ ಒದಗಿಸಬಹುದು ಎಂದವರು ಹೇಳಿದ್ದಾರೆ.







