‘ಖಜಾನೆ-2 ಯೋಜನೆ ನಿರೀಕ್ಷಿತ ಫಲಿತಾಂಶ ಸಾಧಿಸಲು ವಿಫಲ': ಸಿಎಜಿ ವರದಿ

ಬೆಂಗಳೂರು, ಸೆ. 20: ‘ಆಯವ್ಯಯ ತಯಾರಿಕೆ, ವೆಚ್ಚದ ಜಾಡು ಹಿಡಿಯುವಿಕೆ, ನಗದು ನಿರ್ವಹಣೆ, ಸರಕಾರಿ ಸಾಲ ಮತ್ತು ಖಾತರಿಗಳ ನಿರ್ವಹಣೆ, ಹಣಕಾಸು ಸ್ವತ್ತುಗಳ ನಿರ್ವಹಣೆಯ ಕಾರ್ಯಗಳನ್ನೊಳಗೊಂಡಿರುವ ಖಜಾನೆ-2(ಕೆ2) ಯೋಜನೆಯು ದಶಕಕ್ಕೂ ಹೆಚ್ಚಿನ ಸಮಯವಾದರೂ ನಿರೀಕ್ಷಿತ ಫಲಿತಾಂಶ ಸಾಧಿಸಲು ಅಪೂರ್ಣವಾಗಿದೆ' ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ(ಸಿಎಜಿ)ಯಲ್ಲಿ ಉಲ್ಲೇಖಿಸಲಾಗಿದೆ.
ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಖಜಾನೆ-2 ಕುರಿತು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ' ಮಂಡಿಸಿದ್ದು, ‘2013ರ ಫೆಬ್ರವರಿ ವೇಳೆಗೆ ಯೋಜನೆ ಅಭಿವೃದ್ಧಿಪಡಿಸಲಾಗುವುದು ಮತ್ತು ಎಲ್ಲ ಕಾರ್ಯಗಳನ್ನು ಖಜಾನೆ(ಕೆ)-2 ಮೂಲಕ ಆರಂಭಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, 2021ರ ಮಾರ್ಚ್ ವೇಳೆಗೂ ಪೂರ್ಣಗೊಂಡಿಲ್ಲ' ಎಂದು ತಿಳಿಸಲಾಗಿದೆ.
‘2015ರಿಂದ 2021ರ ಅವಧಿಯಲ್ಲಿ ಕಂತು ಕಂತುಗಳಾಗಿ ಕಾರ್ಯಾರಂಭ ಮಾಡಲಾಗಿದೆ. ಹಲವು ವ್ಯವಹಾರ ಪ್ರಕ್ರಿಯೆಗಳು ಕೆ-2 ಅಪ್ಲಿಕೇಷನ್‍ನಿಂದ ಹೊರಗೆ ಉಳಿದಿವೆ. ಎಲ್ಲ ಮಾಡ್ಯೂಲ್‍ಗಳ ಕಾರ್ಯಾರಂಭದಲ್ಲಿ ವಿಳಂಬವಾದ ಕಾರಣ `ಗೋ-ಲೈವ್' ಘೋಷಣೆ ಸಾಧ್ಯವಾಗಲಿಲ್ಲ. ಕೆ-2 ಒಪ್ಪಂದದ ನಿರ್ವಹಣೆಯ ವೈಫಲ್ಯಗಳಿಂದ ಅರಿತ ಅಂಶಗಳನ್ನು ಸಂಯೋಜಿಸುವ ಮೂಲಕ ಸರಕಾರವು ಸಾಫ್ಟ್‍ವೇರ್ ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
‘ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ವಿಕಸನಗೊಳ್ಳುವ ಯೋಜನೆಯ ದಿಕ್ಕನ್ನು ಪ್ರದರ್ಶಿಸಲು ಮತ್ತು ದಾಖಲಿಸಲು ಕಾರ್ಯತಂತ್ರದ ಯೋಜನೆಯನ್ನು ಸಿದ್ಧಪಡಿಸುವುದನ್ನು ಪರಿಗಣಿಸಬೇಕು. ಬಳಕೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಮೇಲ್ವಿಚಾರಣೆ ಮಾಡಲು ಕಾರ್ಯಚಟುವಟಿಕೆಗಳನ್ನು ಒದಗಿಸುವ ಮೂಲಕ ಅನುದಾನದ ಸಕಾಲಿಕ ಮತ್ತು ಪರಿಣಾಮಕಾರಿ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಕೆ-2 ಸೂಕ್ತ ಕಾರ್ಯಚಟುವಟಿಕೆಗಳನ್ನು ಒದಗಿಸಬಹುದು' ಎಂದು ಸಿಎಜಿ ಶಿಫಾರಸ್ಸು ಮಾಡಿದೆ.







