ಮಂಗಳೂರು: ದ.ಕ. ಜಿಲ್ಲಾ ಆಟೋ ಚಾಲಕ- ಮಾಲಕರಿಂದ ಪ್ರತಿಭಟನೆ
ಪರವಾನಿಗೆ ಇಲ್ಲದೇ ಎಲೆಕ್ಟ್ರಿಕಲ್ ಚಾಲಿತ ಆಟೋರಿಕ್ಷಾಗಳ ಸಂಚಾರಕ್ಕೆ ವಿರೋಧ

ಮಂಗಳೂರು, ಸೆ. 21: ನಗರದಲ್ಲಿ ಸಂಚರಿಸುತ್ತಿರುವ ಎಲೆಕ್ಟ್ರಿಕಲ್ (ಬ್ಯಾಟರಿ ಆಟೋ) ಚಾಲಿತ ಆಟೋರಿಕ್ಷಾಗಳು ಪರವಾನಿಗೆ ಇಲ್ಲದೇ ಸಂಚರಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿ ದ.ಕ. ಜಿಲ್ಲಾ ಆಟೋಚಾಲಕ-ಮಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜಾಥಾ ಬುಧವಾರ ನಗರದಲ್ಲಿ ನಡೆಯಿತು.
ಕದ್ರಿ ಮೈದಾನದಿಂದ ಮಲ್ಲಿಕಟ್ಟೆ, ಬಂಟ್ಸ್‌ಹಾಸ್ಟೆಲ್, ಅಂಬೇಡ್ಕರ್ ವೃತ್ತ, ಹಂಪನಕಟ್ಟ ಮೂಲಕ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ಜಾಥಾ ಸಾಗಿಬಂತು. ನೂರಾರು ರಿಕ್ಷಾ ಚಾಲಕರು ಭಾಗವಹಿಸಿದ್ದರು.
ಒಕ್ಕೂಟದ ಗೌರವ ಅಧ್ಯಕ್ಷ ವಿಷ್ಣುಮೂರ್ತಿ ಅವರು ಮಾತನಾಡಿ, ‘ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಸಿ ಸಾರಿಗೆ ಪ್ರಾಧಿಕಾರದ ನಿಯಂತ್ರಣಕ್ಕೊಳಪಡದೆ ಬ್ಯಾಟರಿಚಾಲಿತ ಆಟೋರಿಕ್ಷಾಗಳು ಸಾರಿಗೆ ಕ್ಷೇತ್ರದಲ್ಲಿ ಹಾಗೂ ಇಂಧನ ಚಾಲಿತ ಆಟೋರಿಕ್ಷಾದಲ್ಲಿನ ಪರವಾನಿಗೆಯಲ್ಲಿನ ಕೇಂದ್ರ, ರಾಜ್ಯ ಸರಕಾರ ಹಾಗೂ ಸಾರಿಗೆ ಪ್ರಾಧಿಕಾರದ ದ್ವಂದ್ವ ನೀತಿ ಖಂಡನೀಯ ಎಂದರು.
ಗೌರವ ಸಲಹೆಗಾರರಾದ ಅರುಣ್ ಕುಮಾರ್ ಅವರು ಮಾತನಾಡಿ, ಎಲೆಕ್ಟ್ರಿಕಲ್ ರಿಕ್ಷಾ ಹೆಸರಿನಲ್ಲಿ ಪ್ರಸಕ್ತ ನ್ಯಾಯಬದ್ಧವಾಗಿ ಪರವಾನಿಗೆ ಪಡೆದು ಬಾಡಿಗೆ ನಡೆಸುತ್ತಿರುವವರ ಬದುಕಿಗೆ ಕೊಡಲಿಯೇಟು ನೀಡಲಾಗುತ್ತಿದೆ. ಸರಕಾರದ ಅವೈಜ್ಞಾನಿಕ ತೀರ್ಮಾನದಿಂದಾಗಿ ನಗರದಲ್ಲಿ ರಿಕ್ಷಾ ಚಾಲಕರು ಬೀದಿಗೆ ಬರುವಂತಾಗಿದೆ. ಜತೆಗೆ ಆಟೋರಿಕ್ಷಾ ನಿಲ್ದಾಣಗಳ ನೋಂದಾವಣೆ ಬಗ್ಗೆ ನಡೆದ ಸಭೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಲ್ಲ. ದರ ಪರಿಷ್ಕರಣೆಯೂ ಆಗಿಲ್ಲ ಎಂದು ದೂರಿದರು.
ಒಕ್ಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ ಬೋಳಾರ, ಗೌರವ ಸಲಹೆಗಾರ ಮಹಮ್ಮದ್ ಇಾನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ನಿರೂಪಿಸಿದರು. ಲೋಕೇಶ್ ಶೆಟ್ಟಿ ಬಳ್ಳಾಲ್‌ಬಾಗ್ ವಂದಿಸಿದರು.











