ನಕಲಿ ಸಾಕ್ಷ್ಯಾಧಾರ ಸಲ್ಲಿಸಿದ ಆರೋಪ: ತೀಸ್ತಾ, ಶ್ರೀಕುಮಾರ್, ಸಂಜೀವ್ ಭಟ್ಟ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ

ತೀಸ್ತಾ ಸೆಟಲ್ವಾಡ್ / ಸಂಜೀವ್ ಭಟ್ (Photo: PTI)
ಅಹ್ಮದಾಬಾದ್: ಗುಜರಾತ್ನಲ್ಲಿ 2002 ರಲ್ಲಿ ನಡೆದ ಗಲಭೆ ಪ್ರಕರಣವೊಂದರಲ್ಲಿ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ್ದಾರೆಂಬ ಆರೋಪದ ಮೇಲೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್(Teesta Setalvad), ನಿವೃತ್ತ ಡಿಜಿಪಿ ಆರ್ ಬಿ ಶ್ರೀಕುಮಾರ್( R B Sreekumar) ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್(Sanjiv Bhatt) ಅವರ ವಿರುದ್ಧ ಗುಜರಾತ್ ವಿಶೇಷ ತನಿಖಾ ತಂಡ ಮಂಗಳವಾರ ಅಹ್ಮದಾಬಾದ್ನ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಿದೆ. ವಿಶೇಷ ತನಿಖಾ ತಂಡದ ನೇತೃತ್ವವನ್ನು ಡಿಐಜಿ ದೀಪನ್ ಭದ್ರನ್ ವಹಿಸಿದ್ದಾರೆ.
ತೀಸ್ತಾಗೆ ಈ ಪ್ರಕರಣದಲ್ಲಿ ಸೆಪ್ಟೆಂಬರ್ 2 ರಂದು ಜಾಮೀನು ದೊರಕಿದ್ದರೆ, ಜೂನ್ 25 ರಿಂದ ಬಂಧನದಲ್ಲಿರುವ ಶ್ರೀಕುಮಾರ್ ಅವರು ಈಗಾಗಲೇ ಗುಜರಾತ್ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದು ಸೆಪ್ಟೆಂಬರ್ 28ರಂದು ಅದು ವಿಚಾರಣೆಗೆ ಬರಲಿದೆ. ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರನ್ನು ಜೂನ್ 25 ರಂದು ಬಂಧಿಸಲಾಗಿತ್ತು. 1990ರಲ್ಲಿ ನಡೆದ ಕಸ್ಟಡಿ ಸಾವು ಪ್ರಕರಣದಲ್ಲಿ ಸಂಜೀವ್ ಭಟ್ ಪಾಲನ್ಪುರ್ ಕಾರಾಗೃಹದಲ್ಲಿದ್ದಾರೆ.
ಮೂವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 468, 471, 194, 211 ಮತ್ತು 218 ಅನ್ವಯ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಸಂಬಂಧ ಆಗಿನ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ದಾಖಲಿಸಿದ್ದ ಪ್ರಕರಣದಲ್ಲಿ ಆಗಿನ ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದ ಮರುದಿನವೇ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.







