ಕಲ್ಸಂಕ ವೃತ್ತದಲ್ಲಿ ಸುಗಮ ಸಂಚಾರಕ್ಕೆ ತುರ್ತು ಕ್ರಮ: ಉಡುಪಿ ಜಿಲ್ಲಾಧಿಕಾರಿ, ಎಸ್ಪಿಯಿಂದ ಜಂಟಿ ಪರಿಶೀಲನೆ

ಉಡುಪಿ, ಸೆ. 21: ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಲ್ಸಂಕ ವೃತ್ತದಲ್ಲಿ ತಕ್ಷಣಕ್ಕೆ ತಾತ್ಕಾಲಿಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಉಡುಪಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಬುಧವಾರ ಜಂಟಿ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಕಲ್ಸಂಕ ವೃತ್ತ, ಉಡುಪಿ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿನ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕಲ್ಸಂಕ ವೃತ್ತದಲ್ಲಿ ಅಂಬಾಗಿಲಿನಿಂದ ಮಣಿಪಾಲ ಕಡೆ ಹೋಗಲು (ಫ್ರೀ ಲೆಫ್ಟ್) ಅನುಕೂಲವಾಗುವಂತೆ ಖಾಸಗಿಯವರಿಂದ ಜಾಗ ಪಡೆದು ಮತ್ತಷ್ಟು ಅಗಲ ಮಾಡಲು ಸೂಚಿಸಲಾಯಿತು. ಈ ವೃತ್ತದಲ್ಲಿ ಸಿಟಿ ಬಸ್ ನಿಲ್ದಾಣ ಕಡೆಯಿಂದ ಗುಂಡಿಬೈಲು ಕಡೆ ಹೋಗುವ ಸೇತುವೆಯಲ್ಲಿರುವ ಫುಟ್‌ಪಾತ್ ಕಿರಿದು ಮಾಡುವ ಬಗ್ಗೆ ತಿಳಿಸಲಾಯಿತು. ಅದೇ ರೀತಿ ಸೂಚನಾ ಫಲಕ, ರಸ್ತೆಗೆ ಮಾರ್ಕಿಂಗ್ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ವೃತ್ತವನ್ನು ಇನ್ನಷ್ಟು ಅಗಲ ಮಾಡುವ ನಿಟ್ಟಿನಲ್ಲಿ ಮಣಿಪಾಲ ಹಾಗೂ ಉಡುಪಿ ಕಡೆಯ ಡಿವೈಡರ್‌ಗಳನ್ನು ಕಟ್ ಮಾಡುವ ಬಗ್ಗೆಯೂ ಸಲಹೆಗಳು ವ್ಯಕ್ತವಾದವು. ತಕ್ಷಣಕ್ಕೆ ಸುಗಮ ಸಂಚಾರಕ್ಕೆ ಅನುಕೂಲವಾಗುವ ಸೂಚನಾ ಫಲಕ, ರಸ್ತೆ ಮಾರ್ಕಿಂಗ್ ಸೇರಿದಂತೆ ತಾತ್ಕಾಲಿಕ ಕಾರ್ಯವನ್ನು ಉಡುಪಿ ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಜಂಟಿಯಾಗಿ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಅದೇ ರೀತಿ ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗ ಳೂರು ಬಸ್‌ಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು. ಆದರೆ ಸ್ಥಳಾವಕಾಶದ ಕೊರತೆಯಿಂದ ಬೆಂಗಳೂರು ಬಸ್‌ಗಳಿಗೆ ರಾತ್ರಿ ೮ಗಂಟೆಯ ನಂತರ ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು.
ನಗರದ ಸಿಟಿ ಬಸ್ ನಿಲ್ದಾಣ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಡಿವೈಡರ್ ರಚಿಸುವ ಬಗ್ಗೆಯೂ ಡಿಸಿ ಮತ್ತು ಎಸ್ಪಿ ಪರಿಶೀಲನೆ ನಡೆಸಿದರು. ಆದರೆ ಬಸ್ ಚಾಲಕರು, ಸಂಚಾರ ಪೊಲೀಸರ ಸಲಹೆಯ ಹಿನ್ನೆಲೆ ಯಲ್ಲಿ ಇಲ್ಲಿ ಡಿವೈಡರ್ ರಚಿಸದೆ ಇರಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಂಜುನಾಥ್, ನಗರಸಭೆ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ಉಡುಪಿ ಸಂಚಾರ ಪೊಲೀಸ್ ಠಾಣಾ ಎಸ್ಸೈ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
"ನಗರದ ಪ್ರಮುಖ ಸರ್ಕಲ್ ಆಗಿರುವ ಕಲ್ಸಂಕದಲ್ಲಿ ಪ್ರತಿದಿನ ವಾಹನಗಳ ದಟ್ಟಣೆಯಿಂದ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದ್ದು, ಇದಕ್ಕೆ ಜಂಟಿಯಾಗಿ ಪರಿ ಶೀಲನೆ ನಡೆಸಲಾಗಿದೆ. ಇಲ್ಲಿ ಆಗಬೇಕಾಗಿರುವ ತುರ್ತು ತಾತ್ಕಾಲಿಕ ಕಾರ್ಯ ವನ್ನು ತಕ್ಷಣದಲ್ಲಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಕಲ್ಸಂಕ ವೃತ್ತ ಅಭಿವೃದ್ಧಿ ಪಡಿಸುವ ಯೋಜನೆ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡಲಾಗುವುದು".
-ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ







