ಸೆ.27ರಿಂದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ವಿಚಾರಣೆಯ ನೇರ ಪ್ರಸಾರ ಆರಂಭ

ಹೊಸದಿಲ್ಲಿ,ಸೆ.21: ಮುಂದಿನ ವಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿಯ ಎಲ್ಲ ಸಂವಿಧಾನ ಪೀಠ ವಿಚಾರಣೆಗಳು ನೇರ ಪ್ರಸಾರಗೊಳ್ಳಲಿವೆ.
ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಾಧೀಶರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು,ಕಲಾಪಗಳ ನೇರ ಪ್ರಸಾರವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಸೆ. 27ರಿಂದ ಸಾಂವಿಧಾನಿಕ ಪ್ರಕರಣಗಳ ವಿಚಾರಣೆಗಳನ್ನು ನಿಯಮಿತವಾಗಿ ಬಿತ್ತರಿಸುವುದರೊಂದಿಗೆ ನೇರ ಪ್ರಸಾರವನ್ನು ಆರಂಭಿಸಲು ನ್ಯಾಯಾಧೀಶರು ಒಪ್ಪಿಕೊಂಡರು ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿದವು.
ಸಾರ್ವಜನಿಕ ಮತ್ತು ಸಾಂವಿಧಾನಿಕ ಮಹತ್ವದ ಪ್ರಕರಣಗಳ ಕಲಾಪಗಳ ನೇರ ಪ್ರಸಾರವನ್ನು ಆರಂಭಿಸುವಂತೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳ ಜೊತೆಗೆ ಎಲ್ಲ ವಕೀಲರ ವಾದಗಳ ಶಾಶ್ವತ ದಾಖಲೆಯನ್ನು ಕಾಯ್ದುಕೊಳ್ಳುವಂತೆ ಕೋರಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಕಳೆದ ವಾರ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿಗೆ ಪತ್ರವನ್ನು ಬರೆದಿದ್ದರು.
ಇಡಬ್ಲುಎಸ್ ಕೋಟಾ,ಹಿಜಾಬ್ ನಿಷೇಧ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮಹತ್ವದ ಪ್ರಕರಣಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದ ಜೈಸಿಂಗ್,ಪ್ರತಿಯೊಬ್ಬ ನಾಗರಿಕನ ಮಾಹಿತಿ ಸ್ವಾತಂತ್ರದ ಮತ್ತು ನ್ಯಾಯವನ್ನು ಪಡೆಯುವ ಮೂಲಭೂತ ಹಕ್ಕಿನ ಭಾಗವಾಗಿ 2018ರ ತೀರ್ಪಿನಂತೆ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು.
ಇಡಬ್ಲುಎಸ್ ಕೋಟಾ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಗಳು,1984ರ ಭೋಪಾಲ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕುರಿತು ಕೇಂದ್ರದ ಅರ್ಜಿ,ದಾವೂದಿ ಬೊಹ್ರಾ ಸಮುದಾಯದಲ್ಲಿನ ಬಹಿಷ್ಕಾರ ಮತ್ತು ಸರಿಪಡಿಸಲಾಗದ ಸಂಬಂಧದ ಆಧಾರದಲ್ಲಿ ಮದುವೆಗಳನ್ನು ವಿಸರ್ಜಿಸುವ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಸೇರಿದಂತೆ ಹಲವಾರು ಮಹತ್ವದ ಪ್ರಕರಣಗಳು ನೇರಪ್ರಸಾರಗೊಳ್ಳುವ ಸಾಧ್ಯತೆಯಿದೆ.
ಸರ್ವೋಚ್ಚ ನ್ಯಾಯಾಲಯವು ತನ್ನ ಸ್ವಂತ ಚಾನೆಲ್‌ನ್ನು ಹೊಂದಿರಬೇಕು ಮತ್ತು ತನ್ಮಧ್ಯೆ ನ್ಯಾಯಾಲಯವು ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಯೂಟ್ಯೂಬ್‌ನಲ್ಲಿ ತನ್ನ ಕಲಾಪಗಳ ನೇರ ಪ್ರಸಾರವನ್ನು ಆರಂಭಿಸಬಹುದು ಎಂದು ಹೇಳಿದ್ದ ಜೈಸಿಂಗ್,ಇದಕ್ಕಾಗಿ ಸಾಕಷ್ಟು ಮೂಲಸೌಕರ್ಯಗಳು ಲಭ್ಯವಿವೆ ಮತ್ತು ಮಾಜಿ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರ ನಿವೃತ್ತಿಯ ದಿನದ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗಿತ್ತು ಎಂದು ಬೆಟ್ಟು ಮಾಡಿದ್ದರು.
ಗುಜರಾತ,ಒಡಿಶಾ,ಕರ್ನಾಟಕ,ಜಾರ್ಖಂಡ್,ಪಾಟ್ನಾ ಮತ್ತು ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳು ತಮ್ಮ ಕಲಾಪಗಳನ್ನು ಯೂಟ್ಯೂಬ್ ಚಾನೆಲ್‌ಗಳ ಮೂಲಕ ನೇರ ಪ್ರಸಾರ ಮಾಡುತ್ತಿವೆ.







