ವಿಧಾನ ಪರಿಷತ್‍ನಲ್ಲಿ 4 ವಿಧೇಯಕಗಳ ಅಂಗೀಕಾರ

ಬೆಂಗಳೂರು, ಸೆ.21: ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ನಾಲ್ಕು ವಿಧೇಯಕಗಳಿಗೆ ಮೇಲ್ಮನೆ ಅಂಗೀಕಾರ ನೀಡಿತು.
ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ 2022ನೆ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ) ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ವಿಧಾನ ಪರಿಷತ್‍ನಲ್ಲಿ ಮಂಡಿಸಿದರು. ವಿಧೇಯಕ ಪರ್ಯಾಲೋಚನೆಗೊಂಡ ನಂತರ ಸದನದಲ್ಲಿ ಅಂಗೀಕಾರಗೊಂಡಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೆ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಎರಡನೆ ತಿದ್ದುಪಡಿ) ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಸಚಿವ ಮಾಧುಸ್ವಾಮಿ ಸದನದಲ್ಲಿ ಮಂಡಿಸಿದರು. ವಿಧೇಯಕ ಪರ್ಯಾಲೋಚನೆಗೊಂಡ ನಂತರ ಸದನದಲ್ಲಿ ಅಂಗೀಕಾರಗೊಂಡಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೆ ಸಾಲಿನ ಕರ್ನಾಟಕ ಮುನಿಸಿಪಾಲಿಟಿ (ತಿದ್ದುಪಡಿ) ವಿಧೇಯಕವನ್ನು ಪೌರಾಡಳಿತ ಸಚಿವರ ಪರವಾಗಿ ಕಾನೂನು ಸಚಿವರಾದ ಮಾಧುಸ್ವಾಮಿ ಸದನದಲ್ಲಿ ಮಂಡಿಸಿದರು. ವಿಧೇಯಕವನ್ನು ಪರ್ಯಾಲೋಚಿಸಿದ ನಂತರ ಅಂಗೀಕಾರಗೊಂಡಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೆ ಸಾಲಿನ ಕರ್ನಾಟಕ ಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಯಮನ) (ತಿದ್ದುಪಡಿ) ವಿಧೇಯಕವನ್ನು ರೇಷ್ಮೆ ಸಚಿವ ಡಾ. ನಾರಾಯಣಗೌಡ ಸದನದಲ್ಲಿ ಮಂಡಿಸಿದರು. ವಿಧೇಯಕವನ್ನು ಪರ್ಯಾಲೋಚಿಸಿದ ನಂತರ ಅಂಗೀಕಾರಗೊಂಡಿತು.







