ಅಂತರ್‌ಜಾತಿ ದಂಪತಿಗಳಿಗೆ ನೆರವಾಗಲು 15 ‘ವಿಶೇಷ ಘಟಕ’ಗಳ ಸ್ಥಾಪನೆ: ನ್ಯಾಯಾಲಯದಲ್ಲಿ ದಿಲ್ಲಿ ಪೊಲೀಸ್ ಹೇಳಿಕೆ

ಹೊಸದಿಲ್ಲಿ, ಸೆ. 21: ಅಂತರ್‌ಜಾತಿ ದಂಪತಿಗಳ ರಕ್ಷಣೆಗಾಗಿ 15 ‘ಜಿಲ್ಲಾ ವಿಶೇಷ ಘಟಕ’ಗಳನ್ನು ಸ್ಥಾಪಿಸಲಾಗಿದೆ ಹಾಗೂ ಗಂಡಾಂತರದ ಸಂದರ್ಭದಲ್ಲಿ ಸಂತ್ರಸ್ತರು ಮಹಿಳಾ ಸಹಾಯವಾಣಿ ಸಂಖ್ಯೆ ‘181’ಕ್ಕೆ ಕರೆ ಮಾಡಬಹುದಾಗಿದೆ ಎಂದು ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಕರೆಯನ್ನು ಸ್ವೀಕರಿಸಿದ ಬಳಿಕ, ಕರೆ ಮಾಡಿದವರ ವಿವರಗಳನ್ನು ಸಂಬಂಧಿತ ಡಿಸಿಪಿಗೆ ನೀಡಲಾಗುವುದು ಹಾಗೂ ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿದ ಬಳಿಕ ಸಂಬಂಧಿತ ದಂಪತಿಯನ್ನು ‘ಸುರಕ್ಷಿತ ಮನೆ’ಗೆ ಕರೆದೊಯ್ಯಲಾಗುವುದು ಎಂದು ಪೊಲೀಸರು ಹೇಳಿದರು.
ಈ ವಿಶೇಷ ಘಟಕಗಳ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ದಿಲ್ಲಿ ಪೊಲೀಸ್ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗುವುದು ಎಂದಿದೆ.
ಅಂತರ್‌ಜಾತಿ ದಂಪತಿಗಳಿಗೆ ನೀಡಲಾಗುವ ಕಿರುಕುಳ ಮತ್ತು ಬೆದರಿಕೆಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲು ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಘಟಕಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿ ‘ದನಕ್ ಬೈ ಹ್ಯುಮ್ಯಾನಿಟಿ’ ಎಂಬ ಸರಕಾರೇತರ ಸಂಘಟನೆ (ಎನ್‌ಜಿಒ)ಯು ನ್ಯಾಯಾಲಯಕ್ಕೆ ಹೋಗಿತ್ತು. ಅದಕ್ಕೆ ಉತ್ತರವಾಗಿ ದಿಲ್ಲಿ ಪೊಲೀಸರು ಈ ಮಾಹಿತಿಯನ್ನು ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನಕ್ಕೆ ಅನುಗುಣವಾಗಿ 15 ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ ಹಾಗೂ ಸಂಬಂಧಿತ ಡಿಸಿಪಿಗಳನ್ನು ಅದರ ಸಮನ್ವಯಾಧಿಕಾರಿಗಳನ್ನಾಗಿ ಮಾಡಲಾಗಿದೆ ಎಂದು ತನ್ನ ಸ್ಥಿತಿಗತಿ ವರದಿಯಲ್ಲಿ ದಿಲ್ಲಿ ಪೊಲೀಸ್ ತಿಳಿಸಿದೆ. ವಿಶೇಷ ಘಟಕದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯೂ ಇದ್ದಾರೆ







