ಇಬ್ಬರು ಮಕ್ಕಳು ಸಹಿತ ಆಸ್ಟ್ರೇಲಿಯಾದ ಮಿಷನರಿ ಕೊಲೆ ಪ್ರಕರಣದ ಆರೋಪಿ ಭೇಟಿಗಾಗಿ ಪ್ರತಿಭಟನೆ ನಡೆಸಿದ ಸುರೇಶ್ ಚವ್ಹಾಂಕೆ

Photo: Twitter/SureshChavhanke
ಭುವನೇಶ್ವರ: 1999 ರಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣ ಸೇರಿದಂತೆ ಮೂರು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದಾರಾ ಸಿಂಗ್ (Dara Singh) ಭೇಟಿ ಮಾಡಲು ಸುದರ್ಶನ್ ಟಿವಿ (Sudarshan TV) ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ(Suresh Chavhanke) ಅವರಿಗೆ ಅನುಮತಿ ನೀಡಲು ಒಡಿಶಾದ ಜೈಲಿನ(Odisha jail) ಅಧಿಕಾರಿಗಳು ನಿರಾಕರಿಸಿದರು.
ಅಧಿಕಾರಿಗಳ ನಿರ್ಧಾರದ ವಿರುದ್ಧ ಕಿಯೋಂಜಾರ್ ಜಿಲ್ಲಾ ಕಾರಾಗೃಹದ ಹೊರಗೆ ಚವ್ಹಾಂಕೆ ಪ್ರತಿಭಟನೆ ನಡೆಸಿ ಗೊಂದಲದ ವಾತಾವರಣ ನಿರ್ಮಿಸಿದ್ದಾರೆ ಎಂದು Hindustan Times ವರದಿ ಮಾಡಿದೆ.
ದಾರಾ ಸಿಂಗ್ ಅವರನ್ನು ಭೇಟಿಯಾಗಲು ತನಗೆ ಅನುಮತಿ ನೀಡಲಾಗಿತ್ತು ಎಂದು ಚವ್ಹಾಂಕೆ ಹೇಳಿದ್ದಾರೆ. ಆದರೆ ಜೈಲು ಅಧಿಕಾರಿಗಳು ಬುಧವಾರ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು ಎಂದು ಚವ್ಹಾಂಕೆ ಆರೋಪಿಸಿದ್ದಾರೆ.
“ನಾವು 15 ದಿನಗಳ ಹಿಂದೆ ಸರ್ಕಾರಕ್ಕೆ ಅರ್ಜಿಯನ್ನು ನೀಡಿದ್ದೇವು, ಒಪ್ಪಿಗೆಯನ್ನು ಕೂಡ ಪಡೆಯಲಾಗಿತ್ತು. ಆದರೆ ಇಂದು ನಾನು ಬಂದಾಗ, ನನ್ನ ಆಧಾರ್ ಕಾರ್ಡ್ನ ಪ್ರತಿಯನ್ನು ತೆಗೆದುಕೊಂಡು ಹೋದರೂ ಅವರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ನಿರಾಕರಿಸಿದರು. ಇದು ನಮ್ಮ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನಾವು ದಾರಾ ಸಿಂಗ್ ಅವರನ್ನು ಭೇಟಿ ಮಾಡಲು ಬಯಸುತ್ತೇವೆ ಮತ್ತು ಇದು ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ. ಅದಕ್ಕಾಗಿಯೇ ನಾನು ಪ್ರತಿಭಟನೆಯಲ್ಲಿ ಕುಳಿತಿದ್ದೇನೆ ಮತ್ತು ನಾನು ಅವರನ್ನು ಭೇಟಿಯಾಗುವವರೆಗೂ ನಾನು ಪಟ್ಟು ಬಿಡುವುದಿಲ್ಲ ಎಂದು ಚವ್ಹಾಂಕೆ ಹೇಳಿರುವುದಾಗಿ Hindustan times ವರದಿ ಮಾಡಿದೆ.







