47 ವೈರಾಣು ಪ್ರಬೇಧದಿಂದ ಚರ್ಮಗಂಟು ರೋಗ ವೇಗವಾಗಿ ಹರಡುತ್ತಿರಬಹುದು: ಅಧ್ಯಯನ
ಹೊಸದಿಲ್ಲಿ, ಸೆ. 21: ದೇಶದಲ್ಲಿ ಕಂಡು ಬಂದ 47 ವೈರಾಣು ಪ್ರಬೇಧಗಳಿಂದ ಚರ್ಮ ಗಂಟು ರೋಗ ವೇಗವಾಗಿ ಹರಡುತ್ತಿರಬಹುದು ಎಂದು ಕೌನ್ಸಿಲ್ ಆಫ್ ಸಯಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್-ಇನ್‌ಸ್ಟಿಟ್ಯೂಟ್ ಆಫ್ ಜಿನೋಮಿಕ್ ಆ್ಯಂಡ್ ಇಂಟಗ್ರೇಟಿವ್ ಬಯಾಲಜಿಯ ಸಂಶೋಧಕರು ತಿಳಿಸಿದ್ದಾರೆ.
ಚರ್ಮ ಗಂಟು ರೋಗ ಈ ವರ್ಷ ದೇಶದ 7 ರಾಜ್ಯಗಳಲ್ಲಿ ಹರಡಿದೆ. ಹಾಗೂ 80 ಸಾವಿರ ಜಾನುವಾರುಗಳ ಸಾವಿಗೆ ಕಾರಣವಾಗಿದೆ. ಬಯೊಆರ್‌ಎಕ್ಸ್‌ವಿಯಲ್ಲಿ ವರದಿಯಾದ ಸಂಶೋಧನೆಯಲ್ಲಿ ವೈರಸ್ ಭಾರತದಲ್ಲಿ ವಿಶಿಷ್ಟ ವಂಶಾವಳಿ ಹೊಂದಿದೆ ಎಂದು ಹೇಳಿದೆ.
ಭವಿಷ್ಯದಲ್ಲಿ ಉತ್ತಮ ರೋಗ ನಿರ್ಣಯವನ್ನು ರೂಪಿಸಲು ಜಾನುವಾರುಗಳಲ್ಲಿ ವೈರಾಣು ಹರಡುವ ಬಗ್ಗೆ ನಿಕಟ ನಿಗಾ ವಹಿಸುವ ಹಾಗೂ ದೊಡ್ಡ ಮಟ್ಟದಲ್ಲಿ ಜೆನೋಮಿಕ್ ಕಣ್ಗಾವಲು ನಡೆಸುವ ಅಗತ್ಯದ ಬಗ್ಗೆ ಜೆನೋಮಿಕ್ ಸಂಶೋಧನೆ ಬೆಳಕು ಚೆಲ್ಲಿದೆ ಎಂದು ಅಧ್ಯಯನದ ಮುಖ್ಯ ಸಂಶೋಧಕ ಡಾ. ಶ್ರೀಧರ್ ಶಿವಸುಬ್ಬು ಅವರು ತಿಳಿಸಿದ್ದಾರೆ.
ವೈರಾಣುವಿನ ಸೀಮಿತ ಸಂಖ್ಯೆಯ ಜಿನೋಮ್ ಅನುಕ್ರಮಗಳು ಲಭ್ಯವಿರುವ ಕಾರಣದಿಂದ ಕಾಯಿಲೆ ಹರಡುವ ಮೂಲವನ್ನು ಕಂಡು ಹಿಡಿಯಲಾಗಲಿಲ್ಲ. ವೈರಾಣುವಿನ ಹೆಚ್ಚುವರಿ ಜಿನೋಮ್ ಕಾಯಿಲೆಯ ಸಂಭಾವ್ಯ ಹರಡುವಿಕೆಯನ್ನು ಕಂಡುಕೊಳ್ಳಲು ನೆರವು ನೀಡಬಹುದು ಎಂದು ಅಧ್ಯಯನ ತಿಳಿಸಿದೆ.







