ಕಿರುಕುಳ, ಅತ್ಯಾಚಾರ ಆರೋಪ: ಬಿಜೆಪಿ ಶಾಸಕ, ಪುತ್ರನ ವಿರುದ್ಧ ಪ್ರಕರಣ ದಾಖಲು

ಆಗ್ರಾ: ಬಿಜೆಪಿ ಶಾಸಕ ಹಾಗೂ ಶಾಸಕ ಪುತ್ರನ ವಿರುದ್ಧ 36 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಿರುಕುಳ, ಅತ್ಯಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫತೇಹಾಬಾದ್ ಕ್ಷೇತ್ರದ ಶಾಸಕ ಛೋಟೇಲಾಲ್ ವರ್ಮಾರ ಪುತ್ರ ಲಕ್ಷ್ಮೀಕಾಂತ್ ವರ್ಮಾ, 2003ರಲ್ಲಿ ಅಂದರೆ ತನಗೆ 17 ವರ್ಷವಿದ್ದಾಗ ಅತ್ಯಾಚಾರ ಎಸಗಿದ್ದಾಗಿ ತಾಜ್‍ಗಂಜ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್ ನಲ್ಲಿ ಮಹಿಳೆ ಆಪಾದಿಸಿದ್ದಾರೆ.
ದೂರುದಾರ ಮಹಿಳೆ ಶಾಸಕರ ಪುತ್ರಿಯ ಸ್ನೇಹಿತೆಯಾಗಿದ್ದು, ಶಾಸಕರ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದರು. 2003ರ ನವೆಂನರ್ 16ರಂದು ಲಕ್ಷ್ಮಿಕಾಂತ ವರ್ಮ ನಿದ್ರಾಜನಕ ವಸ್ತುವಿನಿಂದ ಕೂಡಿದ್ದ ಪಾನೀಯವನ್ನು ನೀಡಿ, ಅತ್ಯಾಚಾರ ಎಸಗಿದ್ದಾಗಿ ದೂರು ನೀಡಲಾಗಿದೆ. ಈ ಘಟನೆಯ ವೀಡಿಯೊವನ್ನು ಮಾಡಿ, ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಕೆಲ ಸಮಯದ ಬಳಿಕ ಲಕ್ಷ್ಮೀಕಾಂತ್ ವರ್ಮಾ, ಈ ಮಹಿಳೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದು, ಆತ ಹಾಗೂ ಸ್ನೇಹಿತನ ಸೈಬರ್ ಕೆಫೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಕೊಟ್ಟಿದ್ದ. ದಂಪತಿಗೆ ಮೊದಲು ಹೆಣ್ಣುಮಗು ಆಗಿತ್ತು. ಎರಡನೇ ಮಗು ಗಂಡುಮಗುವಾಗಬೇಕು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಲು ಬಲವಂತಪಡಿಸಿದ್ದ. ಬಳಿಕ ಗಂಡುಮಗು ಜನಿಸಿತು ಎಂದು ಮಹಿಳೆ ವಿವರಿಸಿದ್ದಾರೆ. ಬಳಿಕ 2006ರಲ್ಲಿ ವಿಚ್ಛೇದನ ಪತ್ರಕ್ಕೆ ಬಲವಂತವಾಗಿ ಸಹಿ ಮಾಡಿಸಿ ರಾಜಸ್ಥಾನದ ಮಹಿಳೆಯೊಬ್ಬರನ್ನು ಆರೋಪಿ ವಿವಾಹವಾಗಿದ್ದ ಎಂದು ದೂರಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.