ಉದ್ಯಮಿ ಗೌತಮ್ ಅದಾನಿ ಸಂಪತ್ತುಗಳಿಕೆ ದಿನಕ್ಕೆ 1600 ಕೋಟಿ ರೂ. !

ಹೊಸದಿಲ್ಲಿ: ಐಐಎಫ್‍ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್-2022 (IIFL Wealth Hurun India Rich List 2022) ಪ್ರಕಾರ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬೆಳೆದಿರುವ ಉದ್ಯಮಿ ಗೌತಮ್ ಅದಾನಿ(Gautam Adani)ಯವರ ಸಂಪತ್ತು 10.94 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಇವರ ಸಂಪತ್ತು ಪ್ರತಿದಿನ 1,600 ಕೋಟಿ ರೂಪಾಯಿಗೂ ಅಧಿಕ ದರದಲ್ಲಿ ಹೆಚ್ಚಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅವರನ್ನು ಹಿಂದಿಕ್ಕಿ ಅದಾನಿ ಸಮೂಹದ ಮುಖ್ಯಸ್ಥ ಎರಡನೇ ಸ್ಥಾನಕ್ಕೇರಿದ್ದರು. ಕಳೆದ ಒಂದು ವರ್ಷದಲ್ಲಿ ಅದಾನಿ ಸಂಪತ್ತು ಶೇಕಡ 116ರಷ್ಟು ಹೆಚ್ಚಿದೆ. ಕಳೆದ ಎರಡು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಕಂಪನಿಗಳ ಷೇರು ದರ ಶೇಕಡ 1000 ದಷ್ಟು ಹೆಚ್ಚಿದೆ. ಕಳೆದ ವಾರ ಅದಾನಿ ಸಮೂಹ ಕಂಪನಿಗಳ ಎಲ್ಲ ಲಿಸ್ಟೆಡ್ ಷೇರುಗಳ ಮಾರುಕಟ್ಟೆ ಮೌಲ್ಯ ಟಾಟಾ ಸಮೂಹ ಮತ್ತು ರಿಲಯನ್ಸ್ ಸಮೂಹವನ್ನು ಹಿಂದಿಕ್ಕಿ, ಭಾರತದ ಅತ್ಯಂತ ಮೌಲಿಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯ ಒಟ್ಟು ಮಾರುಕಟ್ಟೆ ನಗದೀಕರಣ ಮೌಲ್ಯ 22.27 ಲಕ್ಷ ಕೋಟಿ ರೂಪಾಯಿ.
ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ಸಂಪತ್ತು ಕಳೆದ ಒಂದು ವರ್ಷದಲ್ಲಿ ಶೇಕಡ 11ರಷ್ಟು ಏರಿಕೆ ಕಂಡಿದ್ದು, ಒಟ್ಟು ಮೌಲ್ಯ 7.94 ಲಕ್ಷ ಕೋಟಿ ರೂಪಾಯಿ. ಕಳೆದ ಐದು ವರ್ಷದಲ್ಲಿ ಸಂಪತ್ತು ಏರಿಕೆ ಪ್ರಮಾಣ ಶೇಕಡ 115ರಷ್ಟಾಗಿದೆ ಎಂದು ವರದಿ ವಿವರಿಸಿದೆ. ವರದಿಯ ಪ್ರಕಾರ ಈ ಇಬ್ಬರ ಸಂಪತ್ತು ಗರಿಷ್ಠ ಏರಿಕೆಯಾಗಿದೆ.
ಸಂಪತ್ತಿನ ಏರಿಕೆಯಲ್ಲಿ ಶೇಕಡ 11 ಹೆಚ್ಚಳವಾಗಿಯೂ, ಕಳೆದ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಅಂಬಾನಿ ಅಗ್ರ ರ‍್ಯಾಂಕಿಂಗ್ ಕಳೆದುಕೊಂಡಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.







