ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಬೇಕೆಂಬ ಬೇಡಿಕೆ ತಿರಸ್ಕರಿಸಿದ ಪಂಜಾಬ್ ರಾಜ್ಯಪಾಲ ಪುರೋಹಿತ್: ಎಎಪಿ ಆಕ್ರೋಶ

Photo:PTI
ಚಂಡಿಗಢ: ವಿಶ್ವಾಸ ಗೊತ್ತುವಳಿ ಮಂಡಿಸಲು ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಬೇಕೆಂಬ ಆಮ್ ಆದ್ಮಿ ಪಕ್ಷದ (ಎಎಪಿ) ಸರಕಾರದ ಬೇಡಿಕೆಯನ್ನು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ತಿರಸ್ಕರಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವ ಆದೇಶವನ್ನು ರಾಜ್ಯಪಾಲರು ಹಿಂತೆಗೆದುಕೊಂಡಿದ್ದಾರೆ.
ಪಂಜಾಬ್ ರಾಜ್ಯಪಾಲರ ನಿರ್ಧಾರಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್( Delhi Chief Minister and AAP Convenor Arvind Kejriwal ) " ಸಂಪುಟ ನಿರ್ಧರಿಸಿರುವ ಅಧಿವೇಶನವನ್ನು ರಾಜ್ಯಪಾಲರು ಹೇಗೆ ನಿರಾಕರಿಸುತ್ತಾರೆ? . ಎರಡು ದಿನಗಳ ಹಿಂದೆ, ರಾಜ್ಯಪಾಲರು ಅಧಿವೇಶನಕ್ಕೆ ಅನುಮತಿ ನೀಡಿದ್ದರು. ಯಾವಾಗ ಆಪರೇಷನ್ ಲೋಟಸ್ ವಿಫಲಗೊಳ್ಳಲು ಆರಂಭಿಸಿತೋ,ಸಂಖ್ಯೆ ಪೂರ್ಣವಾಗಿಲ್ಲವೋ ಆಗ ಅನುಮತಿಯನ್ನು ಹಿಂತೆಗೆದುಕೊಳ್ಳುವಂತೆ ಮೇಲಿನಿಂದ ಕರೆ ಬಂದಿದೆ'' ಎಂದು ಟ್ವಿಟಿಸಿದರು.
ರಾಜ್ಯಪಾಲರ ಕ್ರಮವನ್ನು ಟ್ವಿಟರ್ ನಲ್ಲಿ ಟೀಕಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು "ರಾಜ್ಯಪಾಲರು ವಿಧಾನಸಭೆಯನ್ನು ನಡೆಸಲು ಅನುಮತಿಸದಿರುವುದು ದೇಶದ ಪ್ರಜಾಪ್ರಭುತ್ವದ ಮೇಲೆ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತದೆ ... ಈಗ ಪ್ರಜಾಪ್ರಭುತ್ವವು ಕೋಟ್ಯಂತರ ಜನರಿಂದ ಚುನಾಯಿತ ಪ್ರತಿನಿಧಿಗಳಿಂದ ನಡೆಸಲ್ಪಡುತ್ತಿದೆಯೋ ಅಥವಾ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ವ್ಯಕ್ತಿಯಿಂದ ನಡೆಸಲ್ಪಡುತ್ತಿದೆಯೋ? ಎಂದು ಪ್ರಶ್ನಿಸಿದರು.
ಮಾನ್ ಅವರು ಇಂದು ವಿಧಾನಸಭೆಯಲ್ಲಿ ಎಲ್ಲಾ ಎಎಪಿ ಶಾಸಕರ ಸಭೆಯನ್ನು ಕರೆದಿದ್ದಾರೆ, ಮುಖ್ಯಮಂತ್ರಿಯ ನಿವಾಸವನ್ನು ಬ್ಯಾರಿಕೇಡ್ ಮಾಡುವುದಾಗಿ ಬಿಜೆಪಿ ಘೋಷಿಸಿದೆ.
ಪಂಜಾಬ್ ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ರದ್ದುಪಡಿಸಲು ಎರಡೂ ಪಕ್ಷಗಳು ಕುತಂತ್ರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಎಎಪಿ ತೀವ್ರವಾಗಿ ಟೀಕಿಸಿತು. ರಾಜ್ಯಪಾಲರ ನಡೆಯನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಎಎಪಿ ಬಣ್ಣಿಸಿದೆ.







