ಸೆ.24ರಂದು ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ಯಾತ್ರೆ ಸಮಾರೋಪ

ಮಂಗಳೂರು, ಸೆ.22: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಮಾದಕ ದ್ರವ್ಯಮುಕ್ತ ಸಮಾಜಕ್ಕಾಗಿ ನಡೆಸುತ್ತಿರುವ ಕ್ಯಾಂಪಸ್ ಯಾತ್ರೆಯ ಸಮಾರೋಪ ಸಮಾರಂಭ ಸೆ.24ರಂದು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಅಪರಾಹ್ನ 3ಕ್ಕೆ ಬಿ.ಸಿ.ರೋಡಿನ ಮಿತ್ತಬೈಲು ಆಡಿಟೋರಿಯಂನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಸ್ತುವಾರಿ ಅಡ್ವೋಕೇಟ್ ಬದ್ರುದ್ದೀನ್ ಕುಕ್ಕಾಜೆ ಮಾತನಾಡಿ, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಙಳ್ ನೇತೃದಲ್ಲಿ ಆ.24ರಂದು ಕೇರಳದ ತಿರುವನಂತಪುರದಲ್ಲಿ ಆರಂಭಗೊಂಡ ಕ್ಯಾಂಪಸ್ ಯಾತ್ರೆ ಸೆ.24ರಂದು ಬಿ.ಸಿರೋಡಿನಲ್ಲಿ ಸಮಾರೋಪಗೊಳ್ಳಲಿದೆ. ಇದರಲ್ಲಿ ಸರಿಸುಮಾರು 1,500 ವಿದ್ಯಾರ್ಥಿಗಳು ಭಾಗಹಿಸಲಿದ್ದಾರೆ ಎಂದರು.
ಯಾತ್ರೆಯ ಅಂಗವಾಗಿ ವಿವಿಧ ಕಾಲೇಜುಗಳನ್ನು ಸಂದರ್ಶಿಸಿ ವಿದ್ಯಾರ್ಥಿಗಳ ಜತೆ ಸಂವಾದ, ಗುಂಪು ಚರ್ಚೆ, ಉಪನ್ಯಾಸಕರುಗಳ ಜತೆ ಚರ್ಚೆ, ನೈತಿಕ ಪ್ರಜ್ಞೆ ಬೆಳೆಸುವ ಬಗ್ಗೆ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಮುಖಂಡ ಇಸ್ಮಾಯೀಲ್ ಯಮಾನಿ, ಮುನಾಝ್ ತೋಡಾರು, ಝಲ್ಪೀಕರ್ ಹೂಹಾಕುವ ಕಲ್ಲು ಹಾಗೂ ನೌಶಾದ್ ಮಲಾರ್ ಉಪಸ್ಥಿತರಿದ್ದರು.