'PAYCM' ಪೋಸ್ಟರ್; ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಪರಿಷತ್ ನಲ್ಲಿ ಗದ್ದಲ: ಕಲಾಪ ಮುಂದೂಡಿಕೆ

photo- twitter
ಬೆಂಗಳೂರು, ಸೆ.22: ಬೆಂಗಳೂರು ನಗರದ ಹಲವೆಡೆ 'PAYCM' ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕರ್ತರ ಬಂಧಿಸಿರುವುದನ್ನು ವಿರೋಧಿಸಿ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
'40% ಸರ್ಕಾರ, BJP ಅಂದ್ರೆ ಭ್ರಷ್ಟಾಚಾರ' ಎಂದು ಬರೆದ ಮಾಸ್ಕ್ ಧರಿಸಿ ಸದನಕ್ಕೆ ಬಂದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಲಾಪ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರ ಬಂಧನದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
‘ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಬಿಜೆಪಿಯವರು ಸಹ ಕಾಂಗ್ರೆಸ್ ನಾಯಕರ ಪೋಸ್ಟರ್ ಗಳನ್ನು ಅಂಟಿಸಿದ್ದರು. ಆದರೆ ಯಾರನ್ನೂ ಬಂಧಿಸಿಲ್ಲ. ಗೃಹ ಸಚಿವರು ರಾಜೀನಾಮೆ ನೀಡಬೇಕು’ ಎಂದು ಹರಿಪ್ರಸಾದ್ ಒತ್ತಾಯಿಸಿದರು. ಈ ವೇಳೆ ಪ್ರತಿಕ್ರಿಯಸಿದ ಗೃಹ ಸಚಿವ ಆರಗ ಜ್ಞಾನೇಂದ್ರ , 'ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರ ವಿರುದ್ಧ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಾರೆ. ಕಾಂಗ್ರೆಸಿಗರು ತಮಗಾಗಿ ಪ್ರತ್ಯೇಕ ಕಾನೂನು ಬೇಕು ಎಂದರೆ ಅದು ಇಲ್ಲಿ ನಡೆಯಲ್ಲ' ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಕಡೆಗಳಲ್ಲಿ ಗದ್ದಲ ಉಂಟಾಯಿತು. ಕಾಂಗ್ರೆಸ್ ಸದಸ್ಯರು ಸಭಾಪತಿ ಅವರ ಮುಂದಿನ ಬಾವಿಗೆ ಇಳಿದು ಧರಣಿ ಆರಂಭಿಸಿದಾಗ, ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ಗೆ ಧಿಕ್ಕಾರ ಕೂಗಿದರು. ಧರಣಿ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರು ಬಿಜೆಪಿ, ಶೇ.40ರ ಸರ್ಕಾರಕ್ಕೆ ಎಂದು ಧಿಕ್ಕಾರ ಎಂದು ಕೂಗಿದರು.
ಪರಸ್ಪರ ಘೋಷಣೆಗಳಿಂದ ಗದ್ದಲ ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.







