ಮಣಿಪಾಲದಲ್ಲಿ ‘ನೆಕ್ಸ್ಟ್ ಲೆವೆಲ್’ ಗೇಮಿಂಗ್

ಸಾಂದರ್ಭಿಕ ಚಿತ್ರ
ಉಡುಪಿ, ಸೆ.22: ದೇಶದ ಪ್ರಮುಖ ಗೇಮಿಂಗ್ ಸಂಸ್ಥೆಯಾದ ಟ್ರಿನಿಟಿ ಗೇಮಿಂಗ್ ಇಂಡಿಯಾ, ದೇಶಾದ್ಯಂತ ಫೇಸ್ಬುಕ್ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಕಾಲೇಜು ಮಟ್ಟದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಸ್ಪರ್ಧೆ ‘ನೆಕ್ಸ್ಟ್ ಲೆವೆಲ್’ ಶುಕ್ರವಾರ ಮಣಿಪಾಲದ ಮಾಹೆ ಆವರಣದಲ್ಲಿ ನಡೆಯಲಿದೆ.
ಕಾಲೇಜು ಮಟ್ಟದಲ್ಲಿ ಗೇಮಿಂಗ್ ಉತ್ಸಾಹಿಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಅವರು ಭವಿಷ್ಯದಲ್ಲಿ ವೃತ್ತಿಪರ ಗೇಮರ್ಗಳಾಗಲು ಅನುವು ಮಾಡಿ ಕೊಡುವ ಉದ್ದೇಶದ ‘ನೆಕ್ಸ್ಟ್ ಲೆವೆಲ್’ ಟ್ಯಾಲೆಂಟ್ ಹಂಟ್ ಸ್ಪರ್ಧೆಯ ಏಳನೇ ಹಂತ ಶುಕ್ರವಾರ ಮಣಿಪಾಲದಲ್ಲಿ ನಡೆಯಲಿದೆ ಎಂದು ಟ್ರಿನಿಟಿ ಗೇಮಿಂಗ್ ಇಂಡಿಯಾದ ಸಹ ಸಂಸ್ಥಾಪಕ ಅಭಿಷೇಕ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪಂಜಾಬ್, ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ನಡೆದ ಈ ಗೇಮಿಂಗ್ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರೀ ಯಶಸ್ಸು ಕಂಡಿದೆ. ಇದೀಗ ಏಳನೇ ಲೆಗ್ ಸ್ಪರ್ಧೆ ನಾಳೆ ಮಣಿಪಾಲದಲ್ಲಿ ನಡೆಯಲಿದೆ ಎಂದವರು ಹೇಳಿದ್ದಾರೆ.
ಗೇಮಿಂಗ್ನಲ್ಲಿ ಆಸಕ್ತಿ ಹೊಂದಿರುವ ಕಾಲೇಜು ವಿದ್ಯಾರ್ಥಿಗಳು ವೃತ್ತಿಪರ ಗೇಮರ್ಗಳಾಗಲು ಹಾಗೂ ಇದನ್ನು ಆದಾಯದ ಮೂಲವನ್ನಾಗಿಸಿಕೊಳ್ಳಲು ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದು ಅಭಿಷೇಕ್ ಅಗರ್ವಾಲ್ ನುಡಿದರು.
ದಿನವಿಡೀ ನಡೆಯುವ ಮಣಿಪಾಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳಿಗೆ ಗೇಮಿಂಗ್ನ್ನು ವೃತ್ತಿಯಾಗಿ ಹೇಗೆ ಸ್ವೀಕರಿಸಬಹುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ವೃತ್ತಿಪರ ಗೇಮರ್ ಗಳೊಂದಿಗೆ ಒಡನಾಡುವ ಮೂಲಕ ಅವರು ಗೇಮಿಂಗ್ನಲ್ಲಿ ಹೇಗೆ ತೊಡಗಿಸಿಕೊಳ್ಳ ಬಹುದು ಎಂಬುದನ್ನು ತಿಳಿಸಲಾಗುತ್ತದೆ ಎಂದವರು ವಿವರಿಸಿದರು.
ಫೇಸ್ಬುಕ್ ಗೇಮಿಂಗ್ನಲ್ಲಿ ಯಶಸ್ವಿ ವೃತ್ತಿಜೀವನವನ್ನು ಕಂಡು ಕೊಂಡ ಆ್ಯಡ್ಕ್ರೇಝ್ ಸೇರಿದಂತೆ ಜನಪ್ರಿಯ ಮತ್ತು ಹೆಸರಾಂತ ಗೇಮಿಂಗ್ ರಚನೆಕಾರರೊಂದಿಗೆ ಸಂವಹನ ನಡೆಸಲು ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಎಂದು ಅಗರ್ವಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಳೆದ ಸೆ.5ರಂದು ಪ್ರಾರಂಭಗೊಂಡ ಈ ಸ್ಪರ್ಧೆ ಡಿಸೆಂಬರ್ 2ರವರೆಗೆ ದೇಶದ 23 ನಗರಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.







