ಸಂಸದರನ್ನು ಹುಡುಕುವಂತೆ ಪೊಲೀಸರಿಗೆ ದೂರು ಕೊಡುವ ಸ್ಥಿತಿ: ಸೊರಕೆ
ಆತ್ರಾಡಿ: ರಸ್ತೆ ದುರಾವಸ್ಥೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಉಡುಪಿ, ಸೆ.22: ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ಪರ್ಕಳದಿಂದ ಗುಡ್ಡೆಯಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ 169ಎ ಮುಖ್ಯ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಹಾಗೂ ಜಿಲ್ಲಾಡಳಿತ, ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ವಲಯದ ನೇತೃತ್ವದಲ್ಲಿ ಗುರುವಾರ ಆತ್ರಾಡಿ ಪೇಟೆಯಲ್ಲಿ ರಾ.ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲೆಯಲ್ಲಿ ರಸ್ತೆ ದುರಾವಸ್ಥೆಯಿಂದ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಎಲ್ಲಿ ಅಡಗಿ ಕುಳಿತುಕೊಂಡಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಗೆ ದೂರು ಕೊಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಸತ್ತವರ ಧರ್ಮ ನೋಡಿ ರಾಜಕೀಯ ಚದುರಂಗ ಆಡುತ್ತಿರುವ ಸಂಸದರಿಗೆ, ಜನರ ಕಷ್ಟ ಅರ್ಥ ಆಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಎಲ್ಲ ಕ್ಷೇತ್ರಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ನಾವು ಏನು ಅನ್ಯಾಯ ಮಾಡಿದ್ದೇವೆ. ನಾವು ಪಾಕಿಸ್ತಾನದಲ್ಲಿ ಇದ್ದೇವೆಯೇ ಎಂದು ಪ್ರಶ್ನಿಸಿದ ಅವರು, ಶೀಘ್ರದಲ್ಲಿ ಈ ರಸ್ತೆ ದುರಸ್ತಿ ಮಾಡದಿದ್ದರೆ ಸಂಸದರು, ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲು ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಇಸ್ಮಾಯಿಲ್ ಆತ್ರಾಡಿ, ಗಣೇಶ್ ರಾವ್, ಚರಣ್ ವಿಠಲ್ ಕುದಿ, ರಾಮದಾಸ್ ನಾಯ್ಕ್, ದಿನೇಶ್ ಪೂಜಾರಿ ಪೆರ್ಡೂರು, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ರವೀಂದ್ರ ಪೂಜಾರಿ ಗಂಪ, ಸಂತೋಷ್ ಶೆಟ್ಟಿ ಕೊಡಿಬೆಟ್ಟು, ಗುರುದಾಸ್ ಭಂಡಾರಿ, ಶಶಿಧರ್ ಜತ್ತನ್ನ, ಸುಧೀರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
"ಶೇ.40 ಕಮಿಷನ್, ಶೇ.70ರಷ್ಟು ನಿರುದ್ಯೋಗ, ಬೆಲೆ ಏರಿಕೆ ಬಿಜೆಪಿ ಸರಕಾರದ ಕೊಡುಗೆಗಳಾಗಿವೆ. ಇಂದು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತೆಯನ್ನು ಕಿತ್ತು ಹಾಕುವ ಹುನ್ನಾರ ನಡೆಸಲಾಗುತ್ತಿದೆ. ಅದಾನಿ ಆದಾಯ ಕೊರೋನಾ ಸಂದರ್ಭದಲ್ಲೂ ಹೆಚ್ಚಳ ಕಂಡಿದೆ. ಆದರೆ ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಇಳಿದಿದೆ".
-ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು







