ಉಡುಪಿ: ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಸಚಿವ ಅಂಗಾರಗೆ ಮನವಿ

ಉಡುಪಿ, ಸೆ.22: ಮೀನುಗಾರರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ಇರುವ ತೊಡಕುಗಳನ್ನು ನಿವಾರಿಸುವುದು, ಅವರು ಎದುರಿ ಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಮಲ್ಪೆ ಬಂದರಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮಲ್ಪೆ ಹಾಗೂ ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮಲ್ಪೆ ಇವರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಶಾಸಕ ಕೆ.ರಘುಪತಿ ಭಟ್ ಇವರ ಉಪಸ್ಥಿತಿಯಲ್ಲಿ ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಮನವಿಯೊಂದನ್ನು ಅರ್ಪಿಸಿದರು.
ಯಾಂತ್ರಿಕ ಮೀನುಗಾರಿಕಾ ದೋಣಿಗಳಿಗೆ ನೀಡುತ್ತಿರುವ ಡೀಸಿಲ್ ಪ್ರಮಾಣ ವನ್ನು 400 ಲೀ.ಗೆ ಹೆಚ್ಚಿಸಬೇಕು, ಅಂತಾರಾಜ್ಯ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು, ಅಪಘಾತದ ಸಂದರ್ಭದಲ್ಲಿ ಬೋಟಿನ ವಿಮಾ ಕ್ಲೈಮ್‌ಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕು, ಕೂಡಲೇ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಬಗ್ಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೇ ಮಲ್ಪೆ ಮೀನುಗಾರಿಕಾ ಬಂದರಿನ 2ನೇ ಹರಾಜು ಪ್ರಾಂಗಣದ ದುರಸ್ಥಿ, ಬಂದರಿನ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವುದು, ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳಲ್ಲೂ ಏಕರೂಪದ ನಿಯಮ ಹಾಗೂ ಕಾನೂನು ಜಾರಿಗೊಳಿಸಲು ಆದ್ಯತೆ ನೀಡುವಂತೆ, ಬಂದರಿನೊಳಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ನಾಡದೋಣಿಯವರಿಗೆ ತಂಗುದಾಟ ನಿರ್ಮಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಲ್ಪೆಯ ಮೀನುಗಾರರು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತಕ್ಷಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚಿಸಿದರು.
ಮೀನುಗಾರಿಕಾ ಇಲಾಖೆ ನಿರ್ದೇಶಕರಾದ ರಾಮಾಚಾರಿ, ಉಪ ನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಆಳ ಸಮುದ್ರ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಲ್ಪೆ, ಮಲ್ಪೆ ಮೀನುಗಾರರ ಸಂಘದ ಕೋಶಾಧಿಕಾರಿ ಕರುಣಾಕರ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.








