'PayCM' ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ ಅರ್ಥ: ನಳಿನ್ ಕುಮಾರ್ ಕಟೀಲ್
ಬಿಜೆಪಿಯಿಂದ 'ಸ್ಕ್ಯಾಮ್ ರಾಮಯ್ಯ' ಪುಸ್ತಕ ಬಿಡುಗಡೆ

ಬೆಂಗಳೂರು, ಸೆ. 22: ಪೇ ಸಿಎಂ ಕ್ಯೂಆರ್ ಕೋಡ್ ಅಭಿಯಾನದ ವಿರುದ್ಧ ಬಿಜೆಪಿ ‘ಸ್ಕಾಮ್ ರಾಮಯ್ಯ' ಎಂಬ ಕಿರುಹೊತ್ತಿಯನ್ನು ಬಿಡುಗಡೆ ಮಾಡಿದ್ದು, ಪೇ ಸಿಎಂ ಎಂದರೆ ‘ಪೇ ಕಾಂಗ್ರೆಸ್ ಮೇಡಂ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಗುರುವಾರ ಬಿಜೆಪಿ ರಾಜ್ಯ ಕಾರ್ಯಾಲಯ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಶೇ.100ರಷ್ಟು ಭ್ರಷ್ಟಾಚಾರವನ್ನು ಅನಾವರಣಗೊಳಿಸುವ ಸ್ಕ್ಯಾಮ್ ರಾಮಯ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಉಲ್ಲೇಖ ಇದಾಗಿದೆ. ಶಿವಕುಮಾರ್ ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಅವರು ಚೀಟಿ ಶಿವಕುಮಾರ್ ಆಗಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಕೋರ್ಟಿನ ಆದೇಶದನ್ವಯ ಬಂಧನಕ್ಕೆ ಒಳಗಾಗಲಿದ್ದಾರೆ. ದೇಶದ ಹಳೆಯದಾದ ಕಾಂಗ್ರೆಸ್ ಪಕ್ಷವು ಸುದೀರ್ಘ ಅವಧಿಯ ರಾಜಕಾರಣದಲ್ಲಿ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಉಗ್ರವಾದ ಭಯೋತ್ಪಾದನೆಗೂ ಕಾಂಗ್ರೆಸ್ ಪಕ್ಷವೇ ಕಾರಣ. 1947ರಿಂದ 2014ರ ವರೆಗೆ ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಕ್ಕೆ ಬೃಹತ್ತಾದ ಕೊಡುಗೆ ನೀಡಿದೆ' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾಳೆ ನಾವೇ ಶಾಸಕರು ಸೇರಿಕೊಂಡು 'PAYCM' ಪೋಸ್ಟರ್ ಅಂಟಿಸ್ತೀವಿ: ಡಿ.ಕೆ. ಶಿವಕುಮಾರ್
ಹಗರಣಗಳು: ನೆಹರೂರಿಂದ ಆರಂಭಿಸಿ ಮನಮೋಹನ್ ಸಿಂಗ್ ಕಾಲಘಟ್ಟದವರೆಗೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇತರ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ. ಆಕಾಶ, ನೀರು, ಮಣ್ಣು ಮತ್ತು ಗಾಳಿಯಲ್ಲಿ ಗರಿಷ್ಠ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟೀಕಿಸಿದರು.
‘ಕಾಂಗ್ರೆಸ್ ಹಗರಣಗಳ ಸಂಪೂರ್ಣ ತನಿಖೆ ಮತ್ತು ತಪ್ಪಿತಸ್ಥರ ಬಂಧನ ನಡೆಯಲಿದೆ. ನಮ್ಮ ಸಾಧನೆ ಮತ್ತು ಅಭಿವೃದ್ಧಿಗಳನ್ನು ನೋಡಿ ಆತಂಕಗೊಂಡ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ‘ಸ್ಕ್ಯಾಮ್ ರಾಮಯ್ಯ' ಪುಸ್ತಕ ಹೊರತಂದಿದ್ದೇವೆ'
-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ