ವಿಮಾನದಲ್ಲಿ ಧೂಮಪಾನ ಆರೋಪ: ಯೂಟ್ಯೂಬರ್ ಗೆ ನಿರೀಕ್ಷಣಾ ಜಾಮೀನು

photo : NDTV
ಹೊಸದಿಲ್ಲಿ,ಆ.12: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಧೂಮಪಾನ ಮಾಡಿದ ಆರೋಪಕ್ಕೆ ಸಂಬಂಧಿಸಿ ದೇಹಧಾರ್ಡ್ಯಪಟು (ಬಾಡಿಬಿಲ್ಡರ್ ) ಹಾಗೂ ಯೂಟ್ಯೂಬರ್ ಬಾಬಿ ಕಟಾರಿಯಾಗೆ ದಿಲ್ಲಿಯ ನ್ಯಾಯಾಲಯವು ಗುರುವಾರ ನಿರೀಕ್ಷಣಾ ಜಾಮೀನು ನೀಡಿದೆ.
ಬಾಬ್ಬಿ ಕಟಾರಿಯಾ ಅವರು ದುಬೈಯಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದಾಗ ಧೂಮಪಾನ ಮಾಡಿದ್ದಾರೆಂದು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಕಟಾರಿಯಾ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
ದಿಲ್ಲಿಯ ಪ್ರಧಾನ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯವು ಧರ್ಮೇಶ್ ಶರ್ಮಾ ಅವರು ಗುರುವಾರ ಕಟಾರಿಯಾಗೆ ನಿರೀಕ್ಷಣಾ ಜಾಮೀನು ನೀಡಿದೆ. ಕಟಾರಿಯಾ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ವಿಕಾಸ್ ಪಾಹ್ವಾ ಅವರು ಇಂತಹ ಘಟನೆ ನಡೆಯುವುದು ತೀರಾ ಅಸಂಭವನೀಯವಾಗಿದೆ. ಅಲ್ಲದೆ ಘಟನೆ ನಡೆಯೆನ್ನಲಾದ ಸಂದರ್ಭದಲ್ಲಿ ಅರ್ಜಿದಾರನ ಆಸನದ ಪಕ್ಕದಲ್ಲಿ ಯಾವುದೇ ಸಾಕ್ಷಿದಾರನಾಗಲಿ ಅಥವಾ ಸಿಬ್ಬಂದಿಯಾಗಲಿ ಇರಲಿಲ್ಲವೆಂದು ಪ್ರತಿಪಾದಿಸಿದ್ದರು.
ಕಳೆದ ಆಗಸ್ಟ್ನಲ್ಲಿ ಕಟಾರಿಯಾ ಅವರು ವಿಮಾನದಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯವು ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯವು ಬಾಬಿ ಕಟಾರಿಯಾ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿತ್ತು.