BMS ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ನಲ್ಲಿ ಅಕ್ರಮ ಆರೋಪ: ವಿಧಾನಸಭೆಯಲ್ಲಿ ಜೆಡಿಎಸ್ ಅಹೋರಾತ್ರಿ ಧರಣಿ
ಸದನದಲ್ಲಿ ಕುಮಾರಸ್ವಾಮಿ- ಸಚಿವ ಅಶ್ವತ್ಥ ನಾರಾಯಣ ನಡುವೆ ವಾಗ್ವಾದ ► ಅಶ್ವತ್ಥ ನಾರಾಯಣ ವಿರುದ್ಧ ಕ್ರಮಕ್ಕೆ ಆಗ್ರಹ
ಜೆಡಿಎಸ್ ಸದಸ್ಯರ ಮನವೊಲಿಕೆಗೆ ಯತ್ನಿಸುತ್ತಿರುವ ಸಿಎಂ ಬೊಮ್ಮಾಯಿ
ಬೆಂಗಳೂರು, ಸೆ.22: ಬೆಂಗಳೂರಿನ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಗೆ ದಾನಿ ಟ್ರಸ್ಟಿ ಹಾಗೂ ಅಜೀವ ಟ್ರಸ್ಟಿ ನೇಮಕಾತಿ, ಟ್ರಸ್ಟಿನ ಮೂಲ ಡೀಡ್ನ ಷರತ್ತುಗಳು ಹಾಗೂ ಹಾಗೂ ಸರಕಾರದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಆರೋಪವು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು. ಅಲ್ಲದೆ, ಈ ಸಂಬಂಧ ಸದನ ಸಮಿತಿ ಅಥವಾ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಬಿಎಂಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳ ನೇಮಕ ಹಾಗೂ ಸಂಸ್ಥೆಯ ಅಧೀನದಲ್ಲಿರುವ ಕಾಲೇಜುಗಳ ವಿವಿಧ ಹುದ್ದೆಗಳ ನೇಮಕಾತಿ, ಪ್ರವೇಶ ಪ್ರಕ್ರಿಯೆ, ಶಿಕ್ಷಣ ಶುಲ್ಕ ವಸೂಲಾತಿ ಹಾಗೂ ಜಮೀನಿನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕುಮಾರಸ್ವಾಮಿ ಚರ್ಚೆ ನಡೆಸಿದರು.
ಬಿ.ಎಂ.ಶ್ರೀನಿವಾಸಯ್ಯ ಅವರು ಸಮಾಜ ಸೇವೆ ಮಾಡಬೇಕು ಎಂಬ ಸ್ವಚ್ಛ ಮತ್ತು ಉನ್ನತ ಕನಸು ಕಟ್ಟಿಕೊಂಡು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪಟ್ಟಣದಿಂದ ಬೆಂಗಳೂರಿಗೆ ಬಂದರು. ಮೈಸೂರು ಮಹಾರಾಜರ ಪ್ರೋತ್ಸಾಹದಿಂದ 1946ರಲ್ಲಿ ಶ್ರೀನಿವಾಸಯ್ಯ ದೇಶದಲ್ಲೆ ಮೊಟ್ಟ ಮೊದಲ ಖಾಸಗಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪನೆ ಮಾಡಿದರು. 1953ರಲ್ಲಿ ಅವರು ಮರಣ ಹೊಂದಿದರು. ಆನಂತರ ಅವರ ಮಗ ಬಿ.ಎಸ್.ನಾರಾಯಣ್, ಈ ಕಾಲೇಜಿನ ದಿನನಿತ್ಯದ ನಿರ್ವಹಣೆ, ಆಡಳಿತ ಇತ್ಯಾದಿಗಳನ್ನು ಸುಸೂತ್ರವಾಗಿ ನಡೆಸಲು 1957ರಲ್ಲಿ ಬಿಎಂಎಸ್ ಟ್ರಸ್ಟ್ ಸ್ಥಾಪನೆ ಮಾಡಿದರು ಎಂದು ಕುಮಾರಸ್ವಾಮಿ ಹೇಳಿದರು.
ಈ ಟ್ರಸ್ಟ್ ನ ಮೊದಲ ಬಿ.ವಿ.ನಾರಾಯಣ ರೆಡ್ಡಿ ನೇಮಕವಾದರು. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಡಿದಾಳ್ ಮಂಜಪ್ಪ ಅವರೂ ಈ ಟ್ರಸ್ಟಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಟ್ರಸ್ಟ್ನ ಅಧೀನದಲ್ಲಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜು, ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಿಎಂಎಸ್ ಮಹಿಳಾ ಕಾಲೇಜು ಹಾಗೂ ಬಿಎಂಎಸ್ ಕಾನೂನು ಕಾಲೇಜು ಎಂದು ಅವರು ವಿವರಿಸಿದರು.
ಈ ಟ್ರಸ್ಟು ಮತ್ತು ಅದರ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳಲು 5 ಸದಸ್ಯರು ಇರುವ ಕೌನ್ಸಿಲ್ ಆಫ್ ಟ್ರಸ್ಟಿಗಳು ಇರುತ್ತಾರೆ. ಈ ಪೈಕಿ ಬಿ.ಎಸ್.ನಾರಾಯಣ್ ಅಜೀವ ಟ್ರಸ್ಟಿ ಮತ್ತು ದಾನಿ ಟ್ರಸ್ಟಿ ಆಗಿರುತ್ತಾರೆ ಹಾಗೂ ಇತರೆ 3 ಟ್ರಸ್ಟಿಗಳನ್ನು ನೇಮಕ ಮಾಡುವ ಮತ್ತು 3 ವರ್ಷಕ್ಕೊಮ್ಮೆ ಅವರನ್ನು ಬದಲಾವಣೆ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದಲ್ಲದೆ, ರಾಜ್ಯ ಸರಕಾರವು ತನ್ನ ವಿವೇಚನೆಯೊಂದಿಗೆ ತನ್ನ ಒಬ್ಬ ಟ್ರಸ್ಟಿಯನ್ನು ನೇಮಕ ಮಾಡಬಹುದು ಎಂದು ಮೂಲ ಡೀಡ್ನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
1995ರ ಆ.13ರಂದು ನಾರಾಯಣ್ ತಮ್ಮ ದಾನಿ ಟ್ರಸ್ಟಿ ಅಧಿಕಾರವನ್ನು ಚಲಾಯಿಸಿ 1957ರ ಮೂಲ ಟ್ರಸ್ಟ್ ಡೀಡ್ನ ಷರತ್ತು ಅನ್ವಯ ತಮ್ಮ ನಂತರ, ತಮ್ಮ ಉತ್ತರಾಧಿಕಾರಿಯಾಗಿ ಮತ್ತು ದಾನಿ ಟ್ರಸ್ಟಿಯಾಗಿ ಕರ್ನಾಟಕ ಸರಕಾರವೇ ಕಾರ್ಯಭಾರ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಅವರು ನಿಧನರಾಗುವವರೆಗೂ ಈ ಕುರಿತ ಮಾಹಿತಿಯನ್ನಾಗಲಿ ಅಥವಾ ದಾಖಲೆಯನ್ನಾಗಲಿ ಟ್ರಸ್ಟ್ನವರು ರಾಜ್ಯ ಸರಕಾರಕ್ಕೆ ನೀಡಿರುವುದಿಲ್ಲ. ಆನಂತರ 1999 ಆಗಸ್ಟ್ನಲ್ಲಿ ಅವರ ದ್ವಿತೀಯ ಪತ್ನಿ ರಾಗಿಣಿ ನಾರಾಯಣ್ ಬಿಎಂಎಸ್ ಟ್ರಸ್ಟಿನಲ್ಲಿ ಅಧಿಕಾರ ಸ್ಥಾಪಿಸಲು ರಾಜ್ಯ ಹೈಕೋರ್ಟ್ನಲ್ಲಿ ವ್ಯಾಜ್ಯ ಹೂಡಿದರು. ಅಲ್ಲಿಂದ ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹೊಸ ಆಡಳಿತ ಮಂಡಳಿಯೇ ಟ್ರಸ್ಟ್ ವ್ಯವಹಾರಗಳನ್ನು ನಿರ್ವಹಿಸಬೇಕು ಎಂದು ತಿಳಿಸಿತು ಎಂದು ಅವರು ಹೇಳಿದರು.
ಕಾನೂನು ಸಮರ ಮತ್ತು ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಗಿಣಿ ನಾರಾಯಣ್ ದಾನಿ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಂಡರು. ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ ಪೈ ಅವರನ್ನು ಟ್ರಸ್ಟಿಯಾಗಿ ಸೇರಿಸಿಕೊಂಡರು. 2018ರಲ್ಲಿ ಟ್ರಸ್ಟಿಗಳೆಲ್ಲರೂ ಸೇರಿ ಟ್ರಸ್ಟ್ ಡೀಡ್ನಲ್ಲಿ ಕೆಲವು ಮೂಲಭೂತ ತಿದ್ದುಪಡಿಗಳನ್ನು ಮಾಡಲು ಸರಕಾರಕ್ಕೆ ಮನವಿ ಮಾಡಿದರು. ಅದಕ್ಕೆ ಕಾರಣಗಳನ್ನು ನೀಡಿ ನಾನು ತಿರಸ್ಕರಿಸಿದ್ದೇನೆ. ಈ ಅವಧಿಯಲ್ಲಿ ನನಗೆ ಹಲವು ಬಗೆಯ ಆಮಿಷಗಳು, ಒತ್ತಡಗಳು ಬಂದವು. ಆದರೆ, ನಾನು ಯಾವುದಕ್ಕೂ ತಲೆಬಾಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಆನಂತರ, 2019ರ ಜೂ.10ರಂದು ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಂದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿದ್ದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಒಪ್ಪಿಗೆ ಕೊಡಿಸಿದ್ದಾರೆ. ವಿಪರ್ಯಾಸವೆಂದರೆ ಸಭೆಯಲ್ಲಿ ಹಾಜರಿದ್ದ ಸರಕಾರದ ನಾಮನಿರ್ದೇಶಿತ ಟ್ರಸ್ಟಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ.ಎನ್.ಮಂಜುಳಾ ಅಭಿಪ್ರಾಯವನ್ನು ಟ್ರಸ್ಟಿಗಳು ಪರಿಗಣನೆಗೇ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು.
ಅಲ್ಲದೆ, ಡಾ.ಮಂಜುಳಾ ತಮ್ಮ ಪತ್ರದಲ್ಲಿ ದಯಾನಂದ ಪೈ ಅವರು ಇಡೀ ಟ್ರಸ್ಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ರಾಗಿಣಿ ನಾರಾಯಣ್ ಅವರು ನಡೆಸುತ್ತಿರುವ ಪ್ರಯತ್ನದ ಕುರಿತು ಸರಕಾರದ ಗಮನಕ್ಕೆ ತಂದಿದ್ದಾರೆ. ಇದಲ್ಲದೆ, ರಾಗಿಣಿ ನಾರಾಯಣ್ ತಮ್ಮ ಸೋದರಳಿಯನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಟ್ರಸ್ಟಿ ಸ್ಥಾನಕ್ಕೆ ನೇಮಿಸಿದ ಕಾನೂನುಬದ್ಧತೆಯನ್ನು ಪರಿಶೀಲಿಸುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯ ಸರಕಾರದ ಮಟ್ಟದಲ್ಲಿ ಅಕ್ರಮ ತಿದ್ದುಪಡಿಗಳ ಪತ್ರ ಬಾಕಿ ಬಿದ್ದಿರುವಾಗಲೇ ಉದ್ಯಮಿ ದಯಾನಂದ ಪೈ, ತಮ್ಮ ಪುತ್ರ ರವೀಂದ್ರ ಪೈ ಅವರನ್ನು ಬಿಎಂಎಸ್ ಟ್ರಸ್ಟ್ನ ಅಜೀವ ಟ್ರಸ್ಟಿ ಸ್ಥಾನಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ನೋಂದಾಯಿತ ನಾಮನಿರ್ದೇಶನ ಪತ್ರದ ಮೂಲಕ ನೇಮಿಸುವ ಹಂತಕ್ಕೆ ಹೋಗಿದ್ದಾರೆ. ಅಷ್ಟೇ ಅಲ್ಲ, ರಾಗಿಣಿ ನಾರಾಯಣ್ ಮತ್ತು ದಯಾನಂದ ಪೈ ಇಬ್ಬರೂ ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳನ್ನು 50:50 ಅನುಪಾತದಲ್ಲಿ ಹಂಚಿಕೊಳ್ಳಲು ಒಂದು ಲಿಖಿತ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ಮೇಲೆ ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಬಿದ್ದಿರುವುದು ಕಳವಳಕಾರಿ. ಇದು ಸಾರ್ವಜನಿಕ ಟ್ರಸ್ಟ್ ಆಗಿದ್ದು, ಶಿಕ್ಷಣದ ಕಾರಣಕ್ಕಾಗಿ ಸೇವೆ ಸಲ್ಲಿಸುವ ವೈಭವಯುತ ಇತಿಹಾಸ, ಸಂಪ್ರದಾಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಕರ್ನಾಟಕದ ಜನರಿಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಸಂಸ್ಥೆಯಾಗಿದೆ. ಬೆಲೆ ಕಟ್ಟಲಾಗದ ಆಸ್ತಿಪಾಸ್ತಿಗಳನ್ನು ಹೊಂದಿರುವ, ಮೌಲ್ಯವನ್ನೇ ಕಟ್ಟಲಾಗದ ಪರಂಪರೆಯುಳ್ಳ ಈ ಸಂಸ್ಥೆಯೊಳಕ್ಕೆ ಖಾಸಗಿ ಹಿತಾಸಕ್ತಿಗಳ ಪ್ರವೇಶಕ್ಕೆ, ಅದರಲ್ಲೂ ಲಾಭಕೋರ ಮನಃಸ್ಥಿತಿಯ ರಿಯಲ್ ಎಸ್ಟೇಟ್ ಕುಳಗಳನ್ನು ಬಿಡಲೇಬಾರದು ಎಂದು ಅವರು ಆಗ್ರಹಿಸಿದರು.
1968ರಿಂದ ಈವರೆಗೆ ಬಿಎಂಎಸ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತನ್ನ ಖಜಾನೆಯಿಂದ 80 ಕೋಟಿ ರೂ.ಗಳಿಗೂ ಹೆಚ್ಚು ಜನರ ತೆರಿಗೆ ಹಣವನ್ನು ನೀಡಿದೆ. ಅಷ್ಟೇ ಅಲ್ಲ; ಬಿಎಂಎಸ್ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗಾಗಿ ಹೆಚ್ಚುವರಿ ಅನುದಾನವನ್ನೂ ನೀಡಿದೆ. ಬೆಂಗಳೂರು ನಗರದ ಹೃದಯಭಾಗದಲ್ಲಿರುವ 35,450 ಚದರ ಅಡಿಯಷ್ಟು ಅತ್ಯಂತ ಬೆಲೆ ಬಾಳುವ ಭೂಮಿಯನ್ನು ಬಿಎಂಎಸ್ ಮಹಿಳಾ ಕಾಲೇಜಿಗಾಗಿ ನೀಡಲಾಗಿದೆ. ಅಲ್ಲೇ ಸಮೀಪದಲ್ಲಿ ಕಾನೂನು ಕಾಲೇಜು ಕಟ್ಟಲು 24,000 ಚದರ ಅಡಿ ಜಾಗವನ್ನು ಸರಕಾರ ಮಂಜೂರು ಮಾಡಿದೆ. ಆದರೆ, ಇವೆರಡೂ ಜಾಗಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿವೆ ಎಂದು ಕುಮಾರಸ್ವಾಮಿ ಹೇಳಿದರು.
ಅದೇ ರೀತಿ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ, ಮುಜರಾಯಿ ಇಲಾಖೆಗೆ ಸೇರಿರುವ ದೊಡ್ಡ ಬಸವಣ್ಣ ದೇಗುಲದ ಆಸ್ತಿಯಾಗಿರುವ 40,000 ಚದರ ಅಡಿ ಬೆಲೆ ಬಾಳುವ ಜಾಗವನ್ನು ಬಿಎಂಎಸ್ ಎಜ್ಯುಕೇಷನಲ್ ಟ್ರಸ್ಟ್ಗೆ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ಮಾಡಲಾಗಿತ್ತು. ಆದರೆ, ಈ ಜಾಗವನ್ನು ಟ್ರಸ್ಟ್ ದುರುಪಯೋಗ ಮಾಡಿಕೊಂಡಿದ್ದು, ಖಾಸಗಿ ನರ್ಸಿಂಗ್ ಕಾಲೇಜ್ ಒಂದಕ್ಕೆ ಭೋಗ್ಯಕ್ಕೆ ಕೊಟ್ಟಿದೆ. ಇನ್ನು, ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಚಿಕ್ಕಜಾಲದ ಬಳಿ ನೀಡಲಾಗಿರುವ 4.39 ಎಕರೆ ಪ್ರದೇಶವನ್ನು ಬಿಎಂಎಸ್ ಕಾನೂನು ಕಾಲೇಜು ಕಟ್ಟಲು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡಲಾಗಿದೆ ಎಂದು ಅವರು ದೂರಿದರು.
''ಅಶ್ವತ್ಥ ನಾರಾಯಣ ತಲೆದಂಡ ಆಗಬೇಕು''
ಇಂದು ಬಿಎಂಎಸ್ ಎಜ್ಯುಕೇಷನಲ್ ಟ್ರಸ್ಟ್ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಆಸ್ತಿಯೂ ಸರಕಾರಕ್ಕೇ ಸೇರಿದೆ. ಆದರೆ, ಇಂದು ಅಷ್ಟೂ ಆಸ್ತಿಯನ್ನು ಖಾಸಗಿ ಸ್ವತ್ತನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮಹಾ ಹುನ್ನಾರ ನಡೆದಿದೆ. ಈ ಸಂಬಂಧ ಸಿಬಿಐ ಅಥವಾ ಸದನ ಸಮಿತಿಯ ಮೂಲಕ ತನಿಖೆ ಮಾಡಿ. ಇದರಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಲೆ ದಂಡ ಆಗಲೇಬೇಕು. ವಿರೋಧ ಪಕ್ಷಗಳ ಧಮ್, ತಾಕತ್ತು ಬಗ್ಗೆ ಸವಾಲು ಹಾಕುವ ಮುಖ್ಯಮಂತ್ರಿ, ಈ ವಿಚಾರದಲ್ಲಿ ಸರಕಾರದ ಧಮ್, ತಾಕತ್ತು ಪ್ರದರ್ಶಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಬಿಎಂಎಸ್ ಶಿಕ್ಷಣ ಸಂಸ್ಥೆಗಳು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಾಡದ ಸಾಧನೆಯನ್ನು ಅವು ಮಾಡಿವೆ. ನಮ್ಮ ಸರಕಾರದ ಅವಧಿಯಲ್ಲಿ ಟ್ರಸ್ಟ್ ಡೀಡ್ಗೆ ತಿದ್ದುಪಡಿ ತರಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದುಕೊಂಡೆ ಅನುಮತಿ ನೀಡಲಾಗಿದೆ. ಈ ತಿದ್ದುಪಡಿಗಳಿಂದ ಸರಕಾರದ ಅಧಿಕಾರ ಮೊಟಕು ಆಗುವುದಿಲ್ಲ. ರಾಜಕೀಯ ದುರುದ್ದೇಶದಿಂದ, ನಮ್ಮ ಹೆಸರಿಗೆ ಮಸಿ ಬಳಿಯಲೆಬೇಕು ಎಂದು ನಡೆಸುತ್ತಿರುವ ಈ ಷಡ್ಯಂತ್ರಗಳು ಫಲಿಸುವುದಿಲ್ಲ. ನಾವು ಜೀವನಾಂಶಕ್ಕಾಗಿ ರಾಜಕೀಯಕ್ಕೆ ಬಂದವರಲ್ಲ. ಜನರ ಸೇವೆ ಮಾಡುವ ಬದ್ಧತೆಯೊಂದಿಗೆ ಬಂದಿದ್ದೇವೆ. ಸೀಟು ಹಂಚಿಕೆ ಸೇರಿದಂತೆ ಯಾವುದೆ ವಿಚಾರದಲ್ಲಿ ಅಕ್ರಮಗಳು ನಡೆದಿಲ್ಲ. ಆದುದರಿಂದ, ಯಾವುದೆ ತನಿಖೆ ನಡೆಸುವ ಅಗತ್ಯವಿಲ್ಲ.
ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ
------------------------------
ಜೆಡಿಎಸ್ ಸದಸ್ಯರ ಮನವೊಲಿಕೆಗೆ ಸಿಎಂ ಯತ್ನ: ಬಿಎಂಎಸ್ ಶಿಕ್ಷಣ ಸಂಸ್ಥೆಗಳಲ್ಲಿನ ಅಕ್ರಮದ ಕುರಿತು ತನಿಖೆಗೆ ಆಗ್ರಹಿಸಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಸುತ್ತಿರುವ ಜೆಡಿಎಸ್ ಸದಸ್ಯರ ಮನವೊಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಯತ್ನಿಸಿದರು. ಸದನ ಮುಂದೂಡಿದ ಬಳಿಕ ಸ್ಪೀಕರ್ ಪೀಠದ ಎದುರು ಇರುವ ಬಾವಿಯಲ್ಲಿ ಧರಣಿ ನಡೆಸುತ್ತಿರುವ ಜೆಡಿಎಸ್ ಸದಸ್ಯರನ್ನು ಭೇಟಿ ಮಾಡಿ ಅವರು ಚರ್ಚೆ ನಡೆಸಿದರು.