ಮೇಲ್ಮನೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ
ಬೆಂಗಳೂರು, ಸೆ.22: ರಾಜ್ಯದಲ್ಲಿ ವಕ್ಫ್ ಸ್ವತ್ತುಗಳ ದುರ್ಬಳಕೆ ಮತ್ತು ಅತಿಕ್ರಮಣದ ಕುರಿತು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ವರದಿಯನ್ನು ಪರಿಷತ್ತಿನ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಂಡಿಸಿದರು.
ಗುರುವಾರ ವಿಧಾನ ಪರಿಷತ್ತಿನಲ್ಲಿ ವರದಿ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಸೇರಿ ಹಲವು ಸದಸ್ಯರು ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟುಹಿಡಿದರು. ಅದು ಅಲ್ಲದೆ, ವರದಿ ಮೂಲಕ ಹಲವು ನಾಯಕರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಗದ್ದಲ ಉಂಟಾಯಿತು.
ಇದರ ನಡುವೆಯೇ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಸ್ತಾಪಿಸಿ, ಕಾಂಗ್ರೆಸ್ ನಾಯಕರಾದ ಝಮೀರ್ ಅಹ್ಮದ್‍ಖಾನ್, ನಸೀರ್ ಅಹ್ಮದ್ ಸೇರಿದಂತೆ 12 ಮಂದಿಯ ಹೆಸರಿದೆ ಎಂದು ಹೇಳಲಾಗುತ್ತಿದೆ ಎಂದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ವರದಿಯೇ ಇನ್ನೂ ಮಂಡನೆಯಾಗಿಲ್ಲ ಹೇಗೆ ಹೆಸರು ಉಲ್ಲೇಖಿಸುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿ ವಾಗ್ವಾದಕ್ಕಿಳಿದರು. ಈ ನಡುವೆ ಸಭಾಪತಿ ರಘುನಾಥ್‍ರಾವ್ ಮಲ್ಕಾಪುರೆ ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.
ವರದಿಯಲ್ಲಿ ಏನಿದೆ?: ರಾಜ್ಯದ ಬೀದರ್, ಕಲಬುರ್ಗಿ, ಬೆಂಗಳೂರು ನಗರ, ಕೊಪ್ಪಳ ಸೇರಿದಂತೆ ವಿವಿಧ ನಗರಗಳಲ್ಲಿರುವ ವಕ್ಫ್ ಆಸ್ತಿಯನ್ನು ರಾಜಕೀಯ ಪ್ರತಿನಿಧಿಗಳು, ಸಂಘಸಂಸ್ಥೆಗಳು ಕಬಳಿಸಿರುವ ಬಗ್ಗೆ ವರದಿ ಮಾಡಲಾಗಿದೆ. ರಾಜ್ಯ ಅಲ್ಪಸಂಖ್ಯಾತರ ಅಧಿನಿಯಮ 1994ರ ಕಲಂ 10 (1) (ಜೆ)ರ ಅನ್ವಯ ವಕ್ಫ್ ಸ್ವತ್ತುಗಳ ದುರ್ಬಳಕೆ ಮತ್ತು ಅತಿಕ್ರಮಣದ ಕುರಿತು ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯನ್ನು ಅಲ್ಪಸಂಖ್ಯಾತ ಇಲಾಖೆಯ ಪ್ರಧಾನ ಮುಖ್ಯ ಕಾರ್ಯದರ್ಶಿಗಳಿಗೆ 2011ರ ಅ.12ರಂದು ಸಲ್ಲಿಸಲಾಗಿದೆ.
ಅತಿಕ್ರಮಣದಲ್ಲಿ ಮಾಜಿ ಸಂಸದ, ಹಾಲಿ ಶಾಸಕರು: ಮಾಜಿ ಸಂಸದ ನರಸಿಂಗ್ ರಾವ್ ಎಂಬುವವರು ಬೀದರ್ ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ 8.36 ಎಕರೆ ಅತಿಕ್ರಮಣ ಮಾಡಿದ್ದು, ಅದೇ ಗ್ರಾಮದಲ್ಲಿ ಮುತಾವಲ್ಲಿಯ, ಸೈಯಿದಾ ಖಾತೂನ್ ಎಂಬುವವರು 31.37 ಎಕರೆ ಅತಿಕ್ರಮಣ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅದೇರೀತಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಬೆಂಗಳೂರಿನ ಕುಂಬಾರಪೇಟೆಯಲ್ಲಿರುವ ಸರ್ವೆ ನಂ.10ರಲ್ಲಿ ಜಾಗ ಅತಿಕ್ರಮಣ. ಮುಹಮ್ಮದ್ ಗೌಸ್ ಅವರು ಮಕಾನ್ ರಸ್ತೆಯಲ್ಲಿ 7,329 ಚ.ಅ. ಅತಿಕ್ರಮಣ. ಶಾಸಕ ಎನ್.ಎ.ಹಾರಿಸ್ ಬಡೇಪುರ ಗ್ರಾಮದಲ್ಲಿ 239.38 ಎಕರೆ ಮತ್ತು ಅವರ ತಾಯಿ, ಹೆಂಡತಿ ಮತ್ತು ಆಪ್ತ ಸಹಾಯಕರ ಹೆಸರಿನಲ್ಲಿ 9.72 ಎಕರೆಯನ್ನು ಗೆಜೆಟ್ ಅಧಿಸೂಚನೆ ಪ್ರಕಾರ ಮಾರಾಟ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಬಡೇಪುರದಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಮ್ ಅವರು 8.34 ಎಕರೆ, ವಕ್ಕಲಗೇರ ದರ್ಗಾದಲ್ಲಿ 2 ಎಕರೆ ಅತಿಕ್ರಮಣ. ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಬೆಂಗಳೂರಿನ ಅಣ್ಣೇಪುರದಲ್ಲಿ 2.3 ಎಕರೆ ಅತಿಕ್ರಮಣ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2.09 ಎಕರೆಯನ್ನು ಒತ್ತುವರಿ ಮಾಡಿರುವುದಾಗಿ ವರದಿಯಲ್ಲಿದೆ.