14,762 ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳಿಗೆ ವಿಧಾನಸಭೆ ಅಸ್ತು
ಬೆಂಗಳೂರು, ಸೆ. 22: ‘ರೈತ ವಿದ್ಯಾನಿಧಿ’ ಯೋಜನೆಗೆ 810 ಕೋಟಿ ರೂ., ಟ್ರಸ್ಟ್ ಮತ್ತು ವಿವಿಧ ಸಮುದಾಯಗಳ ಮಠಗಳಿಗೆ 400 ಕೋಟಿ ರೂ. ಹೆಚ್ಚುವರಿಯಾಗಿ ನೀಡುವ ಒಟ್ಟು 14,762 ಕೋಟಿ ರೂಪಾಯಿ ಮೊತ್ತದ 2022-23ನೆ ಸಾಲಿನ ಪೂರಕ ಅಂದಾಜುಗಳ-ಮೊದಲನೆ ಕಂತಿನ ಬೇಡಿಕೆಗಳ ಪ್ರಸ್ತಾವಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಗುರುವಾರ ವಿಧಾನಸಭೆಯ ವಿತ್ತೀಯ ಕಾರ್ಯಕಲಾಪದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಯವ್ಯಯದಲ್ಲಿ ಹಂಚಿಕೆ ಮಾಡಲಾಗಿರುವ ಮೊತ್ತಕ್ಕಿಂತ ಹೆಚ್ಚಿನ ಅನುದಾನವನ್ನು ನೀಡಲು ಪೂರಕ ಅಂದಾಜುಗಳ ಬೇಡಿಕೆಗಳನ್ನು ಮಂಡಿಸಿದರು. ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಹಾನಿಗೊಳಗಾದ ಮನೆಗಳಿಗೆ ಕೇಂದ್ರದ ಮಾರ್ಗಸೂಚಿಯನ್ನು ಹೊರತುಪಡಿಸಿ ಹೆಚ್ಚುವರಿ ಪಾಲಿನ ಅನುದಾನವೂ ಸೇರಿ ಒಟ್ಟು 837 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ಅಲ್ಲದೆ, ರೈತ ವಿದ್ಯಾನಿಧಿ ಯೋಜನೆಯಡಿ ಟ್ಯಾಕ್ಸಿ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆ ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲು 10 ಕೋಟಿ ರೂ.ಒದಗಿಸಲಾಗಿದೆ. ಇದೇ ವೇಳೆ ಲಿಂಗಾಯತ ಮತ್ತು ಒಗ್ಗಲಿಗರ ಅಭಿವೃದ್ಧಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ನಿಗಮಗಳಿಗೆ ಹಾಗೂ ದೇವಸ್ಥಾನ, ಟ್ರಸ್ಟ್ ಮತ್ತು ಮಠಗಳಿಗೆ 400 ಕೋಟಿ ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಪೂರಕ ಅಂದಾಜಿನ ಮೇಲಿನ ಮಾತನಾಡಿದ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ, ಕೇಂದ್ರದಿಂದ ಬರಬೇಕಿರುವ 14,100 ಕೋಟಿ ರೂ.ಗಳಷ್ಟು ಜಿಎಸ್ಟಿ ಬಾಕಿಯನ್ನು ಪಡೆದುಕೊಳ್ಳಲು ಕ್ರಮ ವಹಿಸಬೇಕು. ಅಲ್ಲದೆ, ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವಂತೆ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆಯಿಂದ ರಾಜ್ಯಕ್ಕೆ ರಾಜಸ್ವ ನಷ್ಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯೊಂದರಿಂದಲೇ 2,500 ಕೋಟಿ ರೂ.ಗಳಷ್ಟು ರಾಜಸ್ವ ಕೈತಪ್ಪಿದೆ. ಹೀಗಾಗಿ ಸರಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಜಿಎಸ್ಟಿ ಬಾಕಿ ವಸೂಲಿಗೆ ಕ್ರಮ ವಹಿಸಲಾಗಿದೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಮೊತ್ತದ ಹಣ ಬರಲಿದೆ. ಅಲ್ಲದೆ, ಅಕ್ರಮ ಕಲ್ಲು-ಮರಳು ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜಧನ ವಸೂಲಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು' ಎಂದರು. ಆ ಬಳಿಕ ಸ್ಪೀಕರ್ ಕಾಗೇರಿ ಪೂರಕ ಅಂದಾಜನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರಕಿತು.