ಖಾಸಗಿ ಬಸ್‍ಗಳ ದುಬಾರಿ ದರಕ್ಕೆ ಕಡಿವಾಣ: ಸಚಿವ ಶ್ರೀರಾಮುಲು
ಬೆಂಗಳೂರು, ಸೆ.23: ದಸರಾ, ದೀಪಾವಳಿ ಸೇರಿದಂತೆ ಮುಂಬರುವ ಹಬ್ಬ-ಹರಿದಿನಗಳಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುವ ಖಾಸಗಿ ಬಸ್‍ಗಳ ಹಾವಳಿಗೆ ನಿಯಂತ್ರಣ ಹೇರಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ವೈ.ಎನ್.ಸತೀಶ್ ಪರವಾಗಿ ಬಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದಸರಾ, ದೀಪಾವಳಿ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಖಾಸಗಿ ಬಸ್‍ಗಳು ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವುದು ಅಲ್ಲದೆ, ದುಬಾರಿ ಶುಲ್ಕ ವಿಧಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಸರಕಾರ ಮುಂದಾಗಿದೆ ಎಂದರು.
ಖಾಸಗಿ ಬಸ್‍ಗಳ ದುಬಾರಿ ದರ ನಿಯಂತ್ರಣ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇದರ ಕಡಿವಾಣಕ್ಕೆ ಸಮಿತಿಯನ್ನು ರಚಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಕೆಎಸ್‍ಆರ್‍ಟಿಸಿ ವತಿಯಿಂದ ಹೆಚ್ಚುವರಿ ಬಸ್ ಸಂಪರ್ಕ ಕಲ್ಪಿಸುವ ಮೂಲಕ ಜನರಿಗೆ ನಗರ ಪ್ರದೇಶಗಳಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.