ಎರಡನೇ ಟ್ವೆಂಟಿ-20: ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಭಾರತ, ಸರಣಿ ಸಮಬಲ
ರೋಹಿತ್ ಶರ್ಮಾ ಔಟಾಗದೆ 46 ರನ್

ನಾಗ್ಪುರ, ಸೆ.23: ಮಳೆಬಾಧಿತ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (ಔಟಾಗದೆ 46, 20 ಎಸೆತ, 4 ಬೌಂಡರಿ, 4 ಸಿಕ್ಸರ್)ನೆರವಿನಿಂದ ಭಾರತವು ಆಸ್ಟ್ರೇಲಿಯ ವಿರುದ್ಧ 6 ವಿಕೆಟ್ ಅಂತರದಿಂದ ಜಯ ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿತು.
ಗೆಲ್ಲಲು 91 ರನ್ ಗುರಿ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ದಿನೇಶ್ ಕಾರ್ತಿಕ್ ಬೆನ್ನುಬೆನ್ನಿಗೆ ಸಿಕ್ಸರ್, ಬೌಂಡರಿ ಸಿಡಿಸಿ ಗೆಲುವಿನ ವಿಧಿ ವಿಧಾನ ಪೂರೈಸಿದರು. ಆಸೀಸ್ ಪರ ಸ್ಪಿನ್ನರ್ ಆ್ಯಡಮ್ ಝಾಂಪ(3-16)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತು. ಆಸ್ಟ್ರೇಲಿಯದ ಪರ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್(ಔಟಾಗದೆ 43 ರನ್, 20 ಎಸೆತ, 4 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ನಾಯಕ ಆ್ಯರೊನ್ ಫಿಂಚ್(31 ರನ್, 15 ಎಸೆತ, 4 ಬೌಂ,1 ಸಿ.)ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಪರ ಅಕ್ಷರ್‌ಪಟೇಲ್ (2-13)ಯಶಸ್ವಿ ಬೌಲರ್ ಎನಿಸಿಕೊಂಡರು. ತಂಡಕ್ಕೆ ವಾಪಸಾಗಿರುವ ಜಸ್‌ಪ್ರಿತ್ ಬುಮ್ರಾ 22 ರನ್‌ಗೆ 1 ವಿಕೆಟ್ ಪಡೆದರು.
ಭಾರತ ಆಡುವ 11ರ ಬಳಗದಲ್ಲಿ 2 ಬದಲಾವಣೆ ಮಾಡಿದೆ. ಉಮೇಶ್ ಯಾದವ್ ಬದಲಿಗೆ ಜಸ್‌ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಬದಲಿಗೆ ರಿಷಭ್ ಪಂತ್‌ರನ್ನು ಸೇರಿಸಿಕೊಳ್ಳಲಾಗಿದೆ.