ವಿದಾಯದ ಪಂದ್ಯವನ್ನಾಡಿದ ರೋಜರ್ ಫೆಡರರ್; ಸ್ವಿಸ್ ಸ್ಟಾರ್ ಜೊತೆ ಕಣ್ಣೀರಿಟ್ಟ ರಫೆಲ್ ನಡಾಲ್

photo: twitter.com/ishaan_ANI
ಲಂಡನ್: ಸ್ವಿಸ್ ಟೆನಿಸ್ ಸ್ಟಾರ್ ರೋಜರ್ ಫೆಡರರ್(Roger Federer), ಶುಕ್ರವಾರ ATP ಟೂರ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ತನ್ನ ದೀರ್ಘಕಾಲದ ಎದುರಾಳಿ, 22 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯ ಒಡೆಯ ರಫೆಲ್ ನಡಾಲ್ ಅವರೊಂದಿಗೆ ಲೇವರ್ ಕಪ್ 2022 ರ ಡಬಲ್ಸ್ ಪಂದ್ಯದಲ್ಲಿ ಆಡಿದರು.
ಪಂದ್ಯದ ನಂತರದ ಸಂದರ್ಶನದಲ್ಲಿ ಫೆಡರರ್ ಕಣ್ಣೀರು ಹಾಕಿದರು. ತನ್ನ ಕೊನೆಯ ವೃತ್ತಿಪರ ಪಂದ್ಯದ ನಂತರ ಪ್ರೆಸೆಂಟರ್ನೊಂದಿಗೆ ಮಾತನಾಡುವಾಗ ಫೆಡರರ್ ಭಾವೋದ್ವೇಗಕ್ಕೆ ಒಳಗಾದರು.
ಫೆಡರರ್ ಮಾತನ್ನು ಕೇಳುತ್ತಿದ್ದ ನಡಾಲ್ಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವ ದೃಶ್ಯವೂ ಕಂಡುಬಂತು.
ಸೆಂಟರ್ ಕೋರ್ಟ್ನಲ್ಲಿ ಟೀಮ್ ವರ್ಲ್ಡ್ ತಂಡದ ಜ್ಯಾಕ್ ಸಾಕ್ ಹಾಗೂ ಫ್ರಾನ್ಸಿಸ್ ಟಿಯಾಫೋ ವಿರುದ್ಧದ ಪಂದ್ಯದಲ್ಲಿ ಫೆಡರರ್ ಹಾಗೂ ನಡಾಲ್ ಟೀಮ್ ಯುರೋಪ್ ತಂಡವನ್ನು ಪ್ರತಿನಿಧಿಸಿದ್ದರು. ಫೆಡರರ್ ಸ್ಪರ್ಧಾತ್ಮಕ ಟೆನಿಸ್ಗೆ ಪ್ರವೇಶಿಸಿ 20 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ . ಅಭಿಮಾನಿಗಳನ್ನು ರಂಜಿಸಲು ಅವರು ಯಾವುದೇ ಅವಕಾಶವನ್ನು ಅವರು ಕೈಬಿಟ್ಟಿಲ್ಲ.
ಫೆಡರರ್ ಹಾಗೂ ನಡಾಲ್ ಡಬಲ್ಸ್ ಪಂದ್ಯವನ್ನು 6-4, 6-7 (2-7), 9-11 ಅಂತರದಿಂದ ಸೋತರು, ಆದರೆ ಫೆಡರರ್ ಆಟವನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಕಿಕ್ಕಿರಿದು ತುಂಬಿದ್ದ ಜನರು ಚಪ್ಪಾಳೆ ತಟ್ಟಿ ತನ್ನ ನೆಚ್ಚಿನ ಆಟಗಾರನಿಗೆ ವಿದಾಯ ಕೋರಿದರು.
Roger Federer and Rafael Nadal in tears next to one another pic.twitter.com/3cuNijL5A3
— ClutchPoints (@ClutchPointsApp) September 23, 2022