ಮಣಿಪಾಲ ಕೆಎಂಸಿ ಕಾಲೇಜು, ಆಸ್ಪತ್ರೆಯ ವತಿಯಿಂದ ಬಾಲ್ಯದ ಕ್ಯಾನ್ಸರ್ ಜಾಗೃತಿಗಾಗಿ ಮೇಣ ಬತ್ತಿಯೊಂದಿಗೆ ನಡಿಗೆ

ಉಡುಪಿ, ಸೆ.24: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು, ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್‌ನ ಸಹಯೋಗದೊಂದಿಗೆ ಶನಿವಾರ ಸಂಜೆ ಮಣಿಪಾಲದಲ್ಲಿ ಬಾಲ್ಯದ ಕ್ಯಾನ್ಸರ್ (ಚೈಲ್ಡ್‌ಹುಡ್ ಕ್ಯಾನ್ಸರ್) ಜಾಗೃತ ಮಾಸದ ಅಂಗವಾಗಿ ಮೇಣದ ಬತ್ತಿ ನಡಿಗೆಯನ್ನು ಆಯೋಜಿಸಿತ್ತು.
ಪುಟ್ಟ ಮಕ್ಕಳಲ್ಲೂ ಕಂಡುಬರುತ್ತಿರುವ ಬಾಲ್ಯದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡಿ, ತಜ್ಞ ವೈದ್ಯರ ತಂಡದ ಮೂಲಕ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖರಾಗುವಂತೆ ಮಾಡಿ ಎಂಬ ಸಂದೇಶವನ್ನು ಮೇಣದ ಬತ್ತಿ ನಡಿಗೆಯೊಂದಿಗೆ ಸಾರ್ವಜನಿಕರಿಗೆ ತಲುಪಿಸಲಾಯಿತು.
ಸೆಪ್ಟೆಂಬರ್ ತಿಂಗಳು ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಬಾಲ್ಯದ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೇಣದಬತ್ತಿ ನಡಿಗೆ ಕಾರ್ಯಕ್ರಮ ಏರ್ಪಡಿಸಿತ್ತು.
ವರ್ಷಕ್ಕೆ 78 ಸಾವಿರ ಮಕ್ಕಳಿಗೆ ಕ್ಯಾನ್ಸರ್: ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ ಸುಮಾರು 78 ಸಾವಿರ ಮಕ್ಕಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ರೋಗವು ನಮ್ಮ ದೇಶದಲ್ಲಿ ವಿಳಂಬವಾಗಿ ಪತ್ತೆಯಾಗುತ್ತಿರುವುದರಿಂದ ನುರಿತ ತಜ್ಞರಲ್ಲಿಗೆ ಬರುವಾಗ ತಡವಾಗುತ್ತಿದೆ. ಕ್ಯಾನ್ಸರ್ ಒಂದು ಕಳಂಕ ಎಂಬ ಜನರ ಮನೋಭಾವದ ಕಾರಣದಿಂದ ಗುಣವಾಗುವ ದರದಲ್ಲಿ ಕಡಿಮೆ ಇದೆ ಎಂದರು.
ಕೆಎಂಸಿ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಬಾಲ್ಯದ ಕ್ಯಾನ್ಸರ್ ಜಾಗೃತಿ ಕುರಿತು ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಚಿನ್ನವು ಅಮೂಲ್ಯ ವಾದ ಲೋಹವನ್ನು ಸಾಂಕೇತಿಸುವುದರಿಂದ ಆಸ್ಪತ್ರೆಯ ಆವರಣ ವನ್ನು ಚಿನ್ನದಂತ ಬೆಳಕಿನಿಂದ ಬೆಳಗಿಸಲಾಗಿದೆ. ನಮ್ಮ ಜೀವನದಲ್ಲಿ ಅತ್ಯಮೂಲ್ಯವಾದ ವಸ್ತು ಅಂದರೆ ನಮ್ಮ ಮಕ್ಕಳನ್ನು ಪ್ರತಿಬಿಂಬಿಸಲು ಇದು ಪರಿಪೂರ್ಣ ಬಣ್ಣವಾಗಿದೆ ಎಂದು ಹೇಳಿದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಆಸ್ಪತ್ರೆಯು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಯಾವುದೇ ಅಡೆತಡೆ ಗಳಿಲ್ಲದೆ ಚಿಕಿತ್ಸೆಯನ್ನು ಪೂರ್ಣಗೊಳಿಸಲು ಅವರಿಗೆ ಸಮಗ್ರ ಆರೈಕೆಯನ್ನು ಖಚಿತಪಡಿಸುತ್ತದೆ ಎಂದರು.
ನಡಿಗೆಯು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮುಖ್ಯ ದ್ವಾರದಿಂದ ಹೊರಟು ಟೈಗರ್ ಸರ್ಕಲ್ ಮೂಲಕ ಆಕ್ಸೆಸ್ಲೈಫ್ ಮಾಹೆ ಮಣಿಪಾಲದವರೆಗೆ ನಡೆಯಿತು. ನಡಿಗೆಯಲ್ಲಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ಬೆಂಬಲವನ್ನು ತೋರಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾಎಂ.ವಿ. ಕಾರ್ಯಕ್ರಮ ನಿರೂಪಿಸಿದರು.




