ಯುವಕನಿಂದ 7 ವರ್ಷದ ಬಾಲಕಿಯ ಅಪಹರಿಸಿ ಹತ್ಯೆ; ಅತ್ಯಾಚಾರದ ಶಂಕೆ

ಇಂದೋರ್, ಸೆ.24: ಏಳು ವರ್ಷದ ಬಾಲಕಿಯೊಬ್ಬಳನ್ನು ಯುವಕನೊಬ್ಬ ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದು, ಆನಂತರ ಆಕೆಯನ್ನು ಇರಿದು ಕೊಂದ ಭೀಭತ್ಸ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ನಡೆದಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೆಂದು ಪೊಲೀಸರು ಹಾಗೂ ಆಕೆಯ ಕುಟುಂಬ ಸದಸ್ಯರು ಶಂಕಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11:00 ಗಂಟೆಯ ವೇಳೆಗೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿಯು, ಅಪಹರಿಸಿದ್ದಾನೆ. ಆತನ ಮನೆಯಿಂದ ಜೋರಾದ ಆಕ್ರಂದನ ಕೇಳಿದ ಬಂದಾಗ ಸ್ಥಳೀಯರು ರಕ್ಷಣೆಗಾಗಿ ಧಾವಿಸಿ ಬಂದಿದ್ದರು. ಆಗ ಆರೋಪಿಯು ರಕ್ತಸಿಕ್ತ ಚಾಕುವನ್ನು ಹಿಡಿದುಕೊಂಡು ಬಂದು, ನೆರೆದಿದ್ದವರಿಗೆ ಬೆದರಿಕೆ ಹಾಕಿದ್ದಾನೆ. ಆದಾಗ್ಯೂ ಜನರು ಆತನನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಆರೋಪಿ. ಮನೆಯೊಳಗೆ ಬಾಲಕಿಯು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಬಾಲಕಿಯನ್ನು ಸ್ಕೂಟರ್‌ನಲ್ಲೇ ಸ್ಥಳೀಯರು ಆಸ್ಪತ್ರೆಗೆ ತಂದಾಗ, ಆಕೆ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿಯನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಸಾಧ್ಯತೆಯಿರುವುದಾಗಿ ಪ್ರಯೋಗಾಲಯದ ಪರೀಕ್ಷೆಗಳಿಂದ ತಿಳಿದುಬಂದಿದೆ ಎಂದು ಶವಪರೀಕ್ಷೆ ನಡೆಸಿದ ವೈದ್ಯರೊಬ್ಬರು ತಿಳಿಸಿದ್ದಾರೆ. ಘಟನೆಯ ಬಳಿಕ ಉದ್ರಿಕ್ತ ನಿವಾಸಿಗಳ ಗುಂಪೊಂದು, 28 ವರ್ಷ ವಯಸ್ಸಿನ ಆರೋಪಿಯನ್ನು ಲಾಕಪ್‌ನಲ್ಲಿಡಲಾಗಿದ್ದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಲು ಯತ್ನಿಸಿದ್ದು,ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಗರಪಾಲಿಕೆಯ ವಾಹನಕ್ಕೆ ಹಾನಿಯುಂಟು ಮಾಡಿದೆ. ಜನರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿರುವುದಾಗಿ ವರದಿಯಾಗಿದೆ. ಘಟನೆಯ ಬಳಿಕ ನಗರಾಡಳಿತವು, ಆರೋಪಿಯ ಮನೆಯನ್ನು ಧ್ವಂಸಗೊಳಿಸಿದೆ. ಆ ಮನೆಯು ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವುದಾಗಿ ಅದು ಹೇಳಿದೆ. ಆರೋಪಿಯು ಈ ಪ್ರದೇಶದಲ್ಲಿ ಗೂಂಡಾಗಿರಿ ನಡೆಸುತ್ತಿದ್ದು, ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಆತನ ಕುಟುಂಬಿಕರು ಆತ ಮಾನಸಿಕವಾಗಿ ಅಸ್ವಸ್ಥನೆಂದು ಹೇಳಿದೆ.