ಸಿರಿಯಾ ಬಳಿ ದೋಣಿ ಮುಳುಗಿ 77 ವಲಸಿಗರ ಮೃತ್ಯು

ದಮಾಸ್ಕಸ್, ಸೆ.24: ಸಿರಿಯಾದ ಕರಾವಳಿಯ ಬಳಿ ಸಮುದ್ರದಲ್ಲಿ ದೋಣಿ ಮುಳುಗಿ ಕನಿಷ್ಟ 77 ವಲಸಿಗರು ಮೃತಪಟ್ಟಿದ್ದಾರೆ. ಇವರು ಲೆಬನಾನ್‌ನಲ್ಲಿ ದೋಣಿ ಹತ್ತಿದ್ದರು ಎಂದು ಸಿರಿಯಾದ ಆರೋಗ್ಯ ಸಚಿವರು ಹೇಳಿದ್ದಾರೆ.
2019ರಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಲೆಬನಾನ್‌ನಿಂದ ಇತರ ದೇಶಗಳಿಗೆ ಅಕ್ರಮವಾಗಿ ವಲಸೆ ಹೋಗುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಗುರುವಾರ ಲೆಬನಾನ್ ಮತ್ತು ಸಿರಿಯಾದ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸುಮಾರು 150 ಮಂದಿ ಸಣ್ಣ ದೋಣಿಯೊಂದರ ಮೂಲಕ ಹೊರಟಿದ್ದು ಸಿರಿಯಾದ ಟಾರ್ಟಸ್ ನಗರದ ಬಳಿ ಸಮುದ್ರದಲ್ಲಿ ಮುಳುಗಿದೆ. 77 ಮಂದಿ ಮೃತಪಟ್ಟಿದ್ದು 20 ಮಂದಿಯನ್ನು ರಕ್ಷಿಸಲಾಗಿದ್ದು ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸಿರಿಯಾದ ಆರೋಗ್ಯ ಸಚಿವರು ಹೇಳಿದ್ದಾರೆ. ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ರಶ್ಯದ ನೌಕೆಯೂ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದೆ ಎಂದವರು ಹೇಳಿದ್ದಾರೆ.
Next Story