ಕೆಎಸ್‌ಸಿಎ ಅಂತರ್ ವಲಯ ಕ್ರಿಕೆಟ್: ಮಂಗಳೂರು ವಲಯ ಪ್ರಥಮ ಸ್ಥಾನಿ

ಉಡುಪಿ, ಸೆ.25: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ವಿವಿಧ ಮೈದಾನಗಳಲ್ಲಿ ನಡೆದಿರುವ 19 ವರ್ಷದೊಳಗಿನವರ ರಾಜ್ಯಮಟ್ಟದ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಲಯ ತಂಡ ತಾನಾಡಿದ ಐದೂ ಪಂದ್ಯಗಳಲ್ಲಿ ಮೇಲುಗೈಯನ್ನು ಸಾಧಿಸಿ ಗುಂಪಿನಲ್ಲಿ ಪ್ರಥಮ ಸ್ಥಾನಿಯಾಗಿ ಅಭೂತಪೂರ್ವ ಸಾಧನೆ ಮಾಡಿದೆ.
ಪ್ರಬಲ ಧಾರವಾಡ ವಲಯದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಧಾರವಾಡ ವಲಯವು ಪ್ರಥಮ ಇನಿಂಗ್ಸ್‌ನಲ್ಲಿ ಆಶೀಷ್ ನಾಯಕ್ ಅವರ ಮಾರಕ ಆಫ್‌ಸ್ಪಿನ್ ದಾಳಿಗೆ ಸಿಲುಕಿ 203 ರನ್‌ಗಳಿಗೆ ಆಲೌಟಾಯಿತು. ಆಶೀಷ್ 56 ರನ್‌ಗಳಿಗೆ 7 ವಿಕೆಟ್‌ಗಳನ್ನ್ನು ಪಡೆದರು.
ಉತ್ತರವಾಗಿ ಮಂಗಳೂರು ವಲಯ ನಿಶ್ಚಿತ್ ಪೈ ಅವರ ಜವಾಬ್ದಾರಿಯುತ 49ರನ್, ಋಷಿತ್‌ರ 36 ಹಾಗೂ ಋಷಿ 33 ಇವರ ಬ್ಯಾಟಿಂಗ್ ನೆರವಿನಿಂದ 208 ರನ್‌ಗಳ ಮೊತ್ತವನ್ನು ಗಳಿಸಿ ಅಮೂಲ್ಯ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು.
ಹಿಂದಿನ ಪಂದ್ಯಗಳಲ್ಲಿ ಮಂಗಳೂರು ವಲಯವು ಬೆಂಗಳೂರು ಸಿಟಿ ಇಲೆವೆನ್, ಪ್ರೆಸಿಡೆಂಟ್ ಇಲೆವೆನ್, ರಾಯಚೂರು, ಸೆಕ್ರೆಟರಿ ಇಲೆವೆನ್‌ಗಳ ವಿರುದ್ಧ ಡ್ರಾಗೊಂಡ ಪಂದ್ಯಗಳಲ್ಲಿ ಪ್ರಥಮ ಇನ್ನಿಂಗ್ಸ್ ಮುನ್ನಡೆಯನ್ನು ಸಾಧಿಸಿ ಮೇಲುಗೈಯನ್ನು ಸಾಧಿಸಿತ್ತು.