ದಸರಾ ಚಲನಚಿತ್ರೋತ್ಸವ ಉದ್ಘಾಟನೆ: ಪುನೀತ್ ರಾಜ್ ಕುಮಾರ್ ಸಿನೆಮಾಗಳಿಗೆ ಒಂದು ದಿನ ಮೀಸಲು
ಮೈಸೂರು,ಸೆ.26: ಮೈಸೂರು ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ-2022 ಕಾರ್ಯಕ್ರಮವನ್ನು ಸೋಮವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಚಲನಚಿತ್ರೋತ್ಸವದಲ್ಲಿ ಹಲವು ಚಲನಚಿತ್ರಗಳನ್ನು ವೀಕ್ಷಿಸುವ ಸುವರ್ಣ ಅವಕಾಶ ಸಿಕ್ಕಿದೆ. ಚಲನಚಿತ್ರೋತ್ಸವದಲ್ಲಿ ಒಂದು ದಿನ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳನ್ನೇ ಪ್ರದರ್ಶಿಸುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರಳ ದಸರಾ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅದ್ದೂರಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸುಮಾರು 124 ಕಿ.ಮಿ. ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಯುವ ದಸರಾದಲ್ಲಿ "ಅಪ್ಪು ನಮನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.
ನಟಿ ಅನುಪ್ರಭಾಕರ್ ಅವರು ಮಾತನಾಡಿ, 2007ರಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ಎಂ.ಪಿ.ಶಂಕರ್ ಅವರ ಜೊತೆ ಇದೇ ಚಲನಚಿತ್ರೋತ್ಸವವನ್ನು ಉದ್ಘಾಟಿಸುವ ಮೂಲಕ ವೇದಿಕೆ ಹಂಚಿಕೊಂಡಿದ್ದೆ. ಮತ್ತೆ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.
ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಅಪ್ಪುದಿನ ಮಾಡಿ, ಅಪ್ಪು ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕರ್ನಾಟಕ, ಕನ್ನಡಿಗರು ಇರುವವರೆಗೂ ಅಪ್ಪು ಅಮರರಾಗಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಟಿಯರಾದ ಕಾವ್ಯಶೆಟ್ಟಿ, ಅಮೃತ ಅಯ್ಯಂಗಾರ್ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.