ಅತಿಕ್ರಮಣಗೊಂಡ ವಕ್ಫ್ ಆಸ್ತಿ ಮರುಸ್ವಾಧೀನ ಪ್ರಕ್ರಿಯೆಯಲ್ಲಿ ಶೇ.50 ಪ್ರಗತಿ: ಶಾಫಿ ಸಅದಿ

ಮಂಗಳೂರು, ಸೆ.26: ಅತಿಕ್ರಮಣಕ್ಕೊಳಗಾದ ವಕ್ಫ್ ಆಸ್ತಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಶೇ. 50 ಪ್ರಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಶಾಫಿ ಸಅದಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವಕ್ಫ್ ಗೆ ಸೇರಿದ ಬಹುತೇಕ ಭೂಮಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಬೆಂಗಳೂರು, ಗುಲ್ಬರ್ಗ ಜಿಲ್ಲೆಯಲ್ಲಿದೆ. ವಕ್ಫ್ ಮಂಡಳಿಗೆ ಸೇರಿದ ಈಗ ಇರುವ ಭೂಮಿಯನ್ನು ಸಂರಕ್ಷಣೆ ಮಾಡುವುದು ಮತ್ತು ಅತಿಕ್ರಮಣಕ್ಕೊಳಗಾದ ವಕ್ಫ್ ಮಂಡಳಿಯ ಭೂಮಿಯನ್ನು ಮರು ಸ್ವಾಧೀನಕ್ಕೆ ಪಡೆಯುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿತ್ತು. ಈ ನಿಟ್ಟಿನಲ್ಲಿ ನಾನು ಅಧಿಕಾರ ಪಡೆದ ಹತ್ತು ತಿಂಗಳಲ್ಲಿ ನಡೆಸಿದ ಕಾನೂನು ಹೋರಾಟದಲ್ಲಿ ಶೇ. 50ರಲ್ಲಿ ಭೂಮಿಯನ್ನು ಮರಳಿ ಪಡೆಯಲು ಸಾಧ್ಯವಾಗಿದೆ. ಮುಖ್ಯ ವಾಗಿ ಬೀದರ್ ನಲ್ಲಿ ರುವ ಸುಮಾರು 1200 ಎಕರೆ ಭೂಮಿ ವಕ್ಫ್ ಗೆ ಸೇರಿತ್ತು. ಈ ಪೈಕಿ ಅತಿಕ್ರಮಣಕ್ಕೊಳಗಾದ ಭೂಮಿ ಯಲ್ಲಿ ಬಹುತೇಕ ಭೂಮಿ ಮರಳಿ ವಕ್ಫ್ ಗೆ ಪಡೆಯುವ ಹೋರಾಟದಲ್ಲಿ ಯಶಸ್ವಿಯಾಗಿರುವುದಾಗಿ ಶಾಫಿ ಸಅದಿ ತಿಳಿಸಿದ್ದಾರೆ.
ವಕ್ಫ್ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 54ರ ಪ್ರಕಾರ 2754 ಪ್ರಕರಣ ದಾಖಲಾಗಿದೆ.153 ಪ್ರಕರಣ ಗಳಲ್ಲಿ ವಕ್ಫ್ ಭೂಮಿ ಮರಳಿ ಪಡೆಯಲು ಸಾಧ್ಯವಾಗಿದೆ. ರಾಜ್ಯದಲ್ಲಿ ನಡೆದಿರುವ ವಕ್ಫ್ ಭೂಕಬಳಿಕೆ ಮತ್ತು ಹಗರಣಗಳಿಗೆ ಸಂಬಂಧಿಸಿ ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಈ ಹಿಂದೆಯೇ ಸ್ವಾಗತಿಸಿದ್ದೇವೆ. ವರದಿಯನ್ನಾಧರಿಸಿ ಸರಕಾರ ಯಾವುದೇ ಸಂಸ್ಥೆಗಳಿಂದ ತನಿಖೆಗೆ ಆದೇಶಿಸಿದರೂ ಸ್ವಾಗತಿಸುವುದಾಗಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಶಾಫಿ ಸಅದಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಟಿಪ್ಪು ಸುಲ್ತಾನ್, ಹೈದರಾಲಿ, ಬಹುಮನಿ ಸುಲ್ತಾನರು, ಆದಿಲ್ ಶಾ, ನಿಝಾಮರು ಸೇರಿದಂತೆ ರಾಜರ ಆಡಳಿತದ ಸಂದರ್ಭದಲ್ಲಿ ಎಲ್ಲಾ ಮಠ ಮಂದಿರಗಳಿಗೆ ಜಮೀನು ನೀಡಿದ್ದಾರೆ. ಆ ಸಂದರ್ಭ ತಮ್ಮ ಸ್ವಂತ ಜಮೀನನನ್ನು ದೇವ ಭವನಗಳಾಗಿರುವ ಮಸೀದಿಗಳಿಗೆ ವಕ್ಫ್ ಮಾಡಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದ ವಕ್ಫ್ ಜಮೀನು ಇದ್ದು ಪ್ರಭಾವಿಗಳಿಂದ ಕಬಳಿಸಲ್ಪಟ್ಟಿದೆ. ಇದೆಲ್ಲವನ್ನೂ ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗಿದ್ದು, ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ ಸಹಿತ ಹಿರಿಯ ನ್ಯಾಯವಾದಿಗಳಲ್ಲೂ ಚರ್ಚಿಸಲಾಗಿದೆ. ಈ ಜಮೀನು ವಕ್ಫ್‌ಗೆ ಮರಳಿ ಸಿಕ್ಕರೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಬಳಿ ಅನುದಾನಕ್ಕಾಗಿ ಕೈಚಾಚುವ ಅಗತ್ಯವಿಲ್ಲ ಎಂದು ಹೇಳಿದರು.
ಕಳೆದೆರಡು ವರ್ಷಗಳಿಂದ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಿಗೆ ಆಯ್ಕೆ ನಡೆದಿರಲಿಲ್ಲ. ಇದನ್ನು ಗನದಲ್ಲಿರಿಸಿ ಸರಕಾರ ಮತ್ತು ಮುಖಂಡ ರೊಂದಿಗೆ ಮಾತುಕತೆ ನಡೆಸಿದ ಬಳಿಕ 26 ಜಿಲ್ಲಾ ಸಮಿತಿಗಳ ಆಯ್ಕೆ ನಡೆಸಲಾಗಿದೆ. ಜಿಲ್ಲಾ ಸಮಿತಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ತರಬೇತಿ ಅಕ್ಟೋಬರ್ ಎರಡನೆ ವಾರ ಹಮ್ಮಿಕೊಳ್ಳಲಾಗುವುದು. ದೊಡ್ಡ ಪ್ರಮಾಣದಲ್ಲಿ ದೇಣಿಗೆ ಬರುವ ದರ್ಗಾ, ಮಸೀದಿಗಳಲ್ಲಿ ಹಗರಣಗಳು ನಡೆದಾಗ ತನಿಖೆಗಾಗಿ ವಕ್ಫ್ ಮಂಡಳಿ ಚರ್ಚಿಸಿ ಅಧಿಕಾರಿಗಳನ್ನು ನೇಮಿಸುತ್ತದೆ. ಆದರೆ ಅದರ ವಿರುದ್ಧ ನ್ಯಾಯಾಲಯದಲ್ಲಿ ತಡೆ ತರಲಾಗುತ್ತದೆ. ಹೀಗಾದಾಗ ವಕ್ಫ್ ಮಂಡಳಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಜನರ ಸಹಕಾರ ಅಗತ್ಯ ಎಂದು ಸಅದಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಸುಳ್ಯ, ಸದಸ್ಯ ರಾದ ಎಂ ಸಲೀಂ ಬೆಂಗ್ರೆ, ಸೈದುದ್ದೀನ್ ಬಜ್ಪೆ, ಮುಸ್ತಾಫ ಕೃಷ್ಣಾಪುರ, ಮೊಹಮ್ಮದ್ ಹನೀಫ್, ಸಿರಾಜ್, ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಝಂ ಪಾಷಾ ಮೊದಲಾದವರು ಉಪಸ್ಥಿತರಿದ್ದರು.







