ದಸರಾ, ದೀಪಾವಳಿ ಪ್ರಯುಕ್ತ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ವಿಶೇಷ ಠೇವಣಿ, ಸಾಲ ನೀಡುವ ಅಭಿಯಾನ: ಡಾ.ರಾಜೇಂದ್ರ ಕುಮಾರ್

ಮಂಗಳೂರು, ಸೆ.26: ದಸರಾ ಹಾಗೂ ದೀಪಾವಳಿ ಪ್ರಯುಕ್ತ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ವಿಶೇಷ ಠೇವಣಿ ಹಾಗೂ ಸಾಲ ನೀಡುವ ಅಭಿಯಾನ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಸದಾ ಹೊಸತನದ ಸೇವೆಯೊಂದಿಗೆ ಗ್ರಾಹಕರ ಅಚ್ಚುಮೆಚ್ಚಿಗೆ ಪಾತ್ರವಾಗಿದ್ದು ನವರಾತ್ರಿ ಯಿಂದ ದೀಪಾವಳಿ ಹಬ್ಬದವರೆಗೆ ವಿಶೇಷ ಠೇವಣಿ ಹಾಗೂ ಸಾಲ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ಒಂದು ವರ್ಷದಿಂದ ಮೇಲ್ಪಟ್ಟು ಎರಡು ವರ್ಷದ ಠೇವಣಿಗಳಿಗೆ ಶೇ.6.50 ಬಡ್ಡಿದರ ಹಾಗೂ ಮೂರು ವರ್ಷದಿಂದ ಐದು ವರ್ಷದವರೆಗಿನ ರೂ 25ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗೆ ಶೇ.8.೦೦ ಬಡ್ಡಿದರವನ್ನು ನಿಗದಿಪಡಿಸಲಾ ಗಿದೆ. ಸಾಂಸ್ಥಿಕ ಠೇವಣಿಗಳಿಗೆ ಶೇ.7.50 ಬಡ್ಡಿದರ ನೀಡಲಾಗುವುದು. ಹಿರಿಯ ನಾಗರಿಕರು, ಸೈನಿಕರಿಗೆ ಹಾಗೂ ಮಹಿಳೆಯರ ಠೇವಣಿಗೆ ಹೆಚ್ಚುವರಿ ಬಡ್ಡಿ ನೀಡಲಾಗುವುದು ಎಂದು ಹೇಳಿದರು.
ಹಿರಿಯ ನಾಗರಿಕರು, ಸೈನಿಕರು ಹಾಗೂ ಮಹಿಳೆಯರು ಇಡುವ ಠೇವಣಿಗೆ ಹೆಚ್ಚುವರಿಯಾಗಿ ಶೇ.0.50 ಬಡ್ಡಿದರ ನೀಡಲಾಗುವುದು. ಅದಲ್ಲದೆ ಹಿರಿಯ ನಾಗರಿಕರು ಇಡುವ ರೂ.10ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ ಶೇ. 0.25 ಹೆಚ್ಚುವರಿ ಬಡ್ಡಿಯನ್ನು ನೀಡಲಾಗುವುದು. ಸಹಕಾರ ಸಂಘಗಳ ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ.8 ಬಡ್ಡಿದರವನ್ನು ನೀಡಲಾಗುವುದು. ಇದು ವಿಶೇಷ ಠೇವಣಿ ಅಭಿಯಾನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್ ಆಕರ್ಷಕ ಬಡ್ಡಿ ದರದಲ್ಲಿ ಗ್ರಾಹಕರಿಗೆ ಗೃಹ ಸಾಲವನ್ನು ನೀಡಲು ಮುಂದಾಗಿದೆ. ವಾಸ್ತವ್ಯದ ಮನೆ ಸಾಲವಾಗಿ 25; ಲಕ್ಷದವರೆಗೆ ಶೇ.9.50 ಬಡ್ಡಿದರದಲ್ಲಿ, 25 ಲಕ್ಷಕ್ಕಿಂತ ಮೇಲ್ಪಟ್ಟ ಮೊತ್ತಕ್ಕೆ ಶೇ.8.95 ಬಡ್ಡಿದರ ನಿಗದಿಪಡಿಸಲಾಗಿದ್ದು ಗರಿಷ್ಠ ರೂ 75 ಲಕ್ಷದವರೆಗೂ ಗೃಹಸಾಲವನ್ನು ನೀಡಲಾಗುವುದು ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಗ್ರಾಹಕರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಡೆಬಿಟ್ ಕಾರ್ಡ್, ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ, ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ, ಉಡುಪಿಗೆ ಮೊಬೈಲ್ ಬ್ಯಾಂಕಿಂಗ್, 15 ಹೊಸ ಶಾಖೆಗಳು, ಸಿದ್ಧಾಪುರ ಶಾಖೆಗೆ ಹೊಸ ಕಟ್ಟಡ, ಪ್ರತೀ ತಾಲೂಕಿಗೆ ಎ.ಟಿ.ಎಂ ಅಳವಡಿಕೆ, ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಯೋಜನೆಯನ್ನು ಬ್ಯಾಂಕ್ ಹೊಂದಿದೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕ ರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಭಾಸ್ಕರ್ ಕೋಟ್ಯಾನ್,ಎಸ್ ಬಿ.ಜಯರಾಮ ರೈ,ಶಶಿ ಕುಮಾರ್ ರೈ ಬಾಲ್ಯೋಟ್ಟು, ವಾದಿ ರಾಜ ಶೆಟ್ಟಿ, ರಾಜು ಪೂಜಾರಿ, ರಾಜಾ ರಾಮ್ ಭಟ್, ಜೈರಾಜ್ ಬಿ.ರೈಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಮೋನಪ್ಪ ಶೆಟ್ಟಿ ಎಕ್ಕಾರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಗೋಪಿನಾಥ್ ಭಟ್ ಉಪಸ್ಥಿತರಿದ್ದರು.