ಮಾಂಸಾಹಾರದ ಜಾಹೀರಾತುಗಳ ನಿಷೇಧ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್
ಇತರರ ಹಕ್ಕುಗಳನ್ನೇಕೆ ಅತಿಕ್ರಮಿಸುತ್ತೀರಿ ಎಂದು ಪ್ರಶ್ನಿಸಿದ ನ್ಯಾಯಾಲಯ

ಮುಂಬೈ: ಪರಿಷ್ಕೃತ ಮತ್ತು ಉತ್ತಮ ಅರ್ಜಿಯನ್ನು ಸಲ್ಲಿಸುವಂತೆ ಜೈನ ಸಮುದಾಯದ ಅರ್ಜಿದಾರರಿಗೆ ಸೋಮವಾರ ಸೂಚಿಸಿದ ಬಾಂಬೆ ಉಚ್ಚ ನ್ಯಾಯಾಲಯವು(Bombay HC), ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸಾಹಾರದ(non-veg food) ಜಾಹೀರಾತುಗಳ ನಿಷೇಧವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಪರಿಗಣಿಸಿ ವಜಾಗೊಳಿಸಿತು. ಇತರರ ಹಕ್ಕುಗಳನ್ನು ಅತಿಕ್ರಮಿಸಲು ಏಕೆ ಬಯಸಿದ್ದೀರಿ ಎಂದು ಅದು ಅರ್ಜಿದಾರರನ್ನು ಪ್ರಶ್ನಿಸಿತು.
ಮುಖ್ಯ ನ್ಯಾಯಮೂರ್ತಿ ದೀಪಂಕರ ದತ್ತಾ ಮತ್ತು ನ್ಯಾ.ಮಾಧವ ಜಾಮ್ದಾರ್ ಅವರ ಪೀಠವು ‘ಸೂಕ್ತ ವಿವರಗಳು ಮತ್ತು ಪ್ರಾರ್ಥನೆಗಳೊಂದಿಗೆ’ ನ್ಯಾಯಾಲಯವನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು.
ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ, ನಿಷೇಧವನ್ನು ಹೇರಿ ನಿಯಮಗಳು ಮತ್ತು ಕಾನೂನುಗಳನ್ನು ತಾನು ರೂಪಿಸುವಂತಿಲ್ಲ ಎಂದು ಪೀಠವು ಹೇಳಿತು.
ಅರ್ಜಿಯು ವಿಚಾರಣೆಗೆ ಬಂದ ಬೆನ್ನಲ್ಲೇ ಪೀಠವು, ಹಕ್ಕುಗಳಿಗೆ ಧಕ್ಕೆಯುಂಟಾದಾಗ ಮಾತ್ರ ನ್ಯಾಯಾಲಯವು ಮಧ್ಯ ಪ್ರವೇಶಿಸಬಹುದು ಎನ್ನುವುದನ್ನು ಸ್ಪಷ್ಟಪಡಿಸಿತು. ‘ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿದೆಯೇ ಎನ್ನುವದನ್ನು ಮೊದಲು ಹೇಳಿ. ಏನನ್ನಾದರೂ ನಿಷೇಧಿಸಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವಂತೆ ನೀವು ಉಚ್ಚ ನ್ಯಾಯಾಲಯವನ್ನು ಕೇಳುತ್ತಿದ್ದೀರಿ. ಅದನ್ನು ಶಾಸಕಾಂಗ ನಿರ್ಧರಿಸಬೇಕು’ ಎಂದು ಅದು ಹೇಳಿತು.
ಇಂತಹ ನಿಷೇಧವನ್ನು ಕೋರುವ ಮೂಲಕ ಅರ್ಜಿದಾರರು ಇತರರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅತಿಕ್ರಮಿಸುತ್ತಿದ್ದಾರೆ ಎಂದು ಹೇಳಿದ ನ್ಯಾಯಾಲಯವು, ‘ಸಂವಿಧಾನದ 19 ವಿಧಿಯ ಉಲ್ಲಂಘನೆಯ ಕುರಿತು ಏನು ಹೇಳುತ್ತೀರಿ? ನೀವೇಕೆ ಇತರರ ಹಕ್ಕುಗಳನ್ನು ಅತಿಕ್ರಮಿಸುತ್ತಿದ್ದೀರಿ? ಎರಡು ರೀತಿಯಲ್ಲಿ ಅದನ್ನು ನೋಡಬಹುದು. ಸಾಮಾನ್ಯ ವ್ಯಕ್ತಿಯೋರ್ವ ಟಿವಿ ಬಂದ್ ಮಾಡುವಂತೆ ಹೇಳುತ್ತಾನೆ, ಆದರೆ ನಾವು ಅದನ್ನು ಕಾನೂನಿನ ದೃಷ್ಟಿಯಿಂದ ನೋಡುತ್ತೇವೆ. ನೀವು ಏನನ್ನು ಕೇಳುತ್ತಿದ್ದೀರೋ ಅದು ಕಾನೂನಿನಲ್ಲಿ ಒದಗಿಸಲ್ಪಟ್ಟಿರಬೇಕು. ಇಲ್ಲಿ ಅಂತಹ ಯಾವುದೇ ಕಾನೂನು ಇಲ್ಲ, ಹೀಗಾಗಿ ನೀವು ಕಾನೂನನ್ನು ರೂಪಿಸುವಂತೆ ನಮ್ಮನ್ನು ಕೇಳುತ್ತಿದ್ದೀರಿ’ ಎಂದು ಹೇಳಿತು.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವನ್ನು ಕೋರಿದರಾದರೂ ನ್ಯಾಯಾಲಯವು, ವಿಚಾರಣೆಯ ಮೊದಲ ದಿನವೇ ಅರ್ಜಿಯನ್ನು ತಿದ್ದುಪಡಿಗೊಳಿಸಲು ಸಮಯಾವಕಾಶವನ್ನು ಕೇಳುವಂತಿಲ್ಲ ಮತ್ತು ನೀವು ಉತ್ತಮವಾಗಿ ಸಿದ್ಧರಾಗಿರಬೇಕಿತ್ತು ಎಂದು ಹೇಳಿತು. ಬಳಿಕ ಅರ್ಜಿಯನ್ನು ಹಿಂದೆಗೆದುಕೊಳ್ಳಲು ಅರ್ಜಿದಾರರಿಗೆ ಅವಕಾಶವನ್ನು ನೀಡಿದ ನ್ಯಾಯಾಲಯವು, ಅರ್ಜಿದಾರರು ಬಯಸಿದರೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿತು.
ಜೈನ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಮಂಬೈನ ಜೈನ ಧರ್ಮೀಯರೋರ್ವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮಾಂಸಾಹಾರದ ಮಾರಾಟ ಅಥವಾ ಸೇವನೆಯನ್ನು ನಿಷೇಧಿಸುವಂತೆ ತಾನು ಕೋರುತ್ತಿಲ್ಲ, ಆದರೆ ಮಾಂಸ ಮತ್ತು ಮಾಂಸದ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವಂತೆ ಕೋರುತ್ತಿದ್ದೇನೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಮಲಯಾಳಂ ನಟ ಶ್ರೀನಾಥ್ ಭಾಸಿ ಬಂಧನ







