‘ವಾಲ್ಮೀಕಿ ಜಯಂತಿ’ ಸರಕಾರಿ ಕಾರ್ಯಕ್ರಮ ಬಹಿಷ್ಕಾರ: ಸತೀಶ್ ಜಾರಕಿಹೊಳಿ

ಬೆಳಗಾವಿ, ಸೆ.26: ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸುವುದಲ್ಲಿ ಸರಕಾರ ವಿಫಲವಾಗಿದೆ. ಆದುದರಿಂದ, ರಾಜ್ಯ ಸರಕಾರಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಯಾವುದೆ ನೈತಿಕೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಅ.9ರಂದು ರಾಜ್ಯ ಸರಕಾರದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಮಾತು ಕೊಟ್ಟು ತಪ್ಪಿರುವ ಸರಕಾರ ಆಚರಿಸುವ ಕಾರ್ಯಕ್ರಮವನ್ನು ಇಡೀ ಸಮುದಾಯ ಬಹಿಷ್ಕರಿಸಲಿದ್ದು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.
ವಾಲ್ಮೀಕಿ ಜಯಂತಿಗೆ ಸಂಬಂಧಿಸಿದಂತೆ ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ನಮ್ಮ ವಿರೋಧ. ಉಳಿದಂತೆ ಯಾರು ಬೇಕಾದರೂ ಜಯಂತಿಯನ್ನು ಆಚರಿಸಬಹುದು. ಅ.9ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿ ನೇತೃತ್ವದಲ್ಲಿ ಮೀಸಲಾತಿ ಬೇಡಿಕೆಗೆ ಆಗ್ರಹಿಸಿ ಧರಣಿ ಇದೆ. ಅಲ್ಲಿಯೇ ಮಹರ್ಷಿ ವಾಲ್ಮೀಕಿ ಭಾವಚಿತ್ರ ಇಟ್ಟು ಜಯಂತಿ ಆಚರಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಬೇಕೆಂಬ ನ್ಯಾಯ ಸಮ್ಮತವಾದ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದೇವೆ. ಈ ಸಂಬಂಧ ಸಮುದಾಯದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದರು. ಆದರೆ, ಈವರೆಗೆ ಅವರು ತಮ್ಮ ಭರವಸೆಯನ್ನು ಈಡೇರಿಸಿಲ್ಲ ಎಂದು ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.







