ತೊಕ್ಕೊಟ್ಟು: ಸಿಪಿಎಂ ರಾಜಕೀಯ ಸಮಾವೇಶ

ಮಂಗಳೂರು, ಸೆ.26: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನರಿಗೆ ಕೋಮುವಾದದ ಕೋತಿಯಾಟ ತೋರಿಸಿ ಜನರ ಗಮನವನ್ನು ಹಿಂದುತ್ವದೆಡೆಗೆ ಸೆಳೆದು ತೆರೆಮರೆಯಲ್ಲಿ ಕಾರ್ಪೊರೆಟ್ ಕುಳಗಳ ಸೇವೆ ಮಾಡುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುವಂತೆ ಮಾಡುತ್ತಿವೆ. ನಿರುದ್ಯೋಗ ತಾಂಡವವಾಡುವಂತೆ ನೋಡಿಕೊಳ್ಳುತ್ತಿದೆ. ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಧರ್ಮದ ಆಧಾರ ದಲ್ಲಿ ಜನರಲ್ಲಿ ದ್ವೇಷ ಹಬ್ಬಿ ಜನರ ನೆಮ್ಮದಿ ಕೆಡಿಸಿದೆ ಎಂದು ಸಿಪಿಎಂ ರಾಜ್ಯ ಮುಖಂಡ ಕಾ. ಜಿ.ಎನ್. ನಾಗರಾಜ್ ಹೇಳಿದರು.
ಸಿಪಿಎಂ ಉಳ್ಳಾಲ ವಲಯ ಸಮಿತಿಯ ವತಿಯಿಂದ ತೊಕ್ಕೊಟ್ಟು ಬಸ್‌ನಿಲ್ದಾಣದಲ್ಲಿ ರವಿವಾರ ನಡೆದ ರಾಜಕೀಯ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಯು.ಜಯಂತ ನಾಯ್ಕ್ ವಹಿಸಿದ್ದರು. ಸಿಪಿಎಂ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡಿದರು.
ವೇದಿಕೆಯಲ್ಲಿ ಪಕ್ಷದ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಹಿರಿಯ ಕಾರ್ಮಿಕ ನಾಯಕರಾದ ಯು.ಬಿ.ಲೋಕಯ್ಯ, ಕೃಷ್ಣಪ್ಪ ಸಾಲಿಯಾನ್, ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು. ರೋಹಿದಾಸ್ ಭಟ್ನಗರ ಸ್ವಾಗತಿಸಿದರು. ವಿಲಾಸಿನಿ ತೊಕ್ಕೊಟ್ಟು ವಂದಿಸಿದರು.







