ಮಂಗಳೂರು: ಬಾಕಿ ವೇತನ ಪಾವತಿ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಅತಿಥಿ ಶಿಕ್ಷಕರಿಂದ ಧರಣಿ

ಮಂಗಳೂರು, ಸೆ.26: ಐದು ತಿಂಗಳಿಂದ ವೇತನ ಪಾವತಿಸದೆ ಸತಾಯಿಸುತ್ತಿರುವುದರಿಂದ ಆಕ್ರೋಶಗೊಂಡ ದ.ಕ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ನಗರದ ಮಿನಿ ವಿಧಾನಸೌಧದ ಮುಂದೆ ಸೋಮವಾರ ಧರಣಿ ನಡೆಸಿ ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸುವಂತೆ ಪಟ್ಟು ಹಿಡಿದರು.
ಉದ್ಯೋಗ ಭದ್ರತೆ, ತಿಂಗಳಿಗೆ ಕನಿಷ್ಟ 22,000 ರೂಪಾಯಿ ವೇತನ ನೀಡುವುದು, ಮಹಿಳಾ ಶಿಕ್ಷಕಿಯರಿಗೆ ಹೆರಿಗೆ ರಜೆ ಸೌಲಭ್ಯ ಒದಗಿಸುವುದು, ವರ್ಷದ 12 ತಿಂಗಳು ವೇತನ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಧರಣಿಯಲ್ಲಿ ಜಿಲ್ಲೆಯ ವಿವಿಧೆಡೆಯ 300ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಪಾಲ್ಗೊಂಡರು.
ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತವು ಮಂಗಳೂರು ತಾಲೂಕು ವ್ಯಾಪ್ತಿಯ ಇಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಧರಣಿ ನಿರತರೊಂದಿಗೆ ಮಾತುಕತೆಗೆ ಕಳುಹಿಸಿಕೊಟ್ಟಿತು. ’ಬಾಕಿ ವೇತನ ಈಗಾಗಲೆ ಬಿಡುಗಡೆಗೊಂಡಿದೆ. ಎರಡು ದಿನಗಳಲ್ಲಿ ಶಿಕ್ಷಕರ ಖಾತೆಗೆ ಜಮಾ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭರವಸೆ ನೀಡಿದರು.
ಎರಡು ದಿನದೊಳಗೆ ಬಾಕಿ ವೇತನ ಸಂದಾಯವಾಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ನಡೆಸುವ ತೀರ್ಮಾನದೊಂದಿಗೆ ಧರಣಿಯನ್ನು ಕೊನೆಗೊಳಿಸಲಾಯಿತು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಬಿ.ಕೆ. ಇಮ್ತಿಯಾಝ್, ನವೀನ್ ಕೊಂಚಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಅತಿಥಿ ಶಿಕ್ಷಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಜಯಮಾಲ ಧರಣಿ ನಿರತರನ್ನು ಉದ್ದೇಶಿ ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಿಕಾ, ಕಾರ್ಯದರ್ಶಿ ಚಿತ್ರಲೇಖಾ ಕೆ, ನಾಯಕಿಯರಾದ ರೇವತಿ ಬಂಟ್ವಾಳ, ಸೌಮ್ಯಾ ಕಡಬ, ಕಾವ್ಯಾ ಸುಳ್ಯ, ಕವಿತಾ ನಾಯಕ್, ಜ್ಯೋತಿ ಧರಣಿಯ ನೇತೃತ್ವ ವಹಿಸಿದ್ದರು.
ನಗರದ ಮಿನಿ ವಿಧಾನಸೌಧದ ಮುಂದೆ ಸೋಮವಾರ ನಡೆದ ಅತಿಥಿ ಶಿಕ್ಷಕರ ಧರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಾಗಿಯಾಗಿದೆ. ಸಿಎಫ್‌ಐ ಮುಖಂಡರಾದ ಸಂಶುದ್ದೀನ್, ಅಶ್ರಫ್ ಪೊರ್ಕೊಡಿ ಮತ್ತಿತರರು ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.